ಅಡ್ವೆ ಸೆ 07 : ಯುವವಾಹಿನಿ (ರಿ.) ಅಡ್ವೆ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ನಂದಿಕೂರು ಅಂಗನವಾಡಿ ಕೇಂದ್ರ ಅಡ್ವೆ ಹಾಗೂ ಸ್ತ್ರೀಶಕ್ತಿ ಸಂಘ ಅಡ್ವೆ ಇವರ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಸೆಪ್ಟೆಂಬರ್ 7ರಂದು ಅಡ್ವೆ ಶಾಲೆಯಲ್ಲಿ ನಡೆಯಿತು.
ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷ ಪ್ರಸಾದ್ ಪಲಿಮಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಅಂಗನವಾಡಿ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಜಯಸ್ಮಿತಾ ಅವರು ಅತಿಥಿಗಳು ಹಾಗೂ ಆಗಮಿಸಿದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ನಂದಿಕೂರು ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ (CHO) ರೀನಾ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರ ವಿತರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಮಮತಾ ಅಂಚನ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಆಪ್ತ ಸಮಾಲೋಚಕಿ ಸುಜಯ ಅವರು ಹದಿಹರೆಯದ ಯುವಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಂಬು ಗರ್ಭಿಣಿಯಾಗಿರುವ ಸುಮಿತ್ರಾ ಅವರಿಗೆ ಸೀಮಂತ ಶಾಸ್ತ್ರ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ತೇಜಲ್ ಮತ್ತು ನಿಹಾಲ್ ಅವರಿಗೆ ಅನ್ನಪ್ರಾಶನ ಕಾರ್ಯಕ್ರಮವನ್ನು ನಡೆಸಲಾಯಿತು.
ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಪುಟಾಣಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಮುದ್ದು ಕೃಷ್ಣ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಅಕ್ಷಯ ಸುವರ್ಣ ವಾಚಿಸಿದರು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು.
ಪೋಷಣ್ ಮಾಸಾಚರಣೆಯ ಅಂಗವಾಗಿ 25 ಬಗೆಯ ಅಡುಗೆ ಪದಾರ್ಥಗಳನ್ನು ತಯಾರಿಸಿ ತಂದ ಬಂಧುಗಳ ಹೆಸರನ್ನು ಉಷಾ ಅವರು ವಾಚಿಸಿದರು. ಅಡುಗೆ ತಯಾರಿಕೆಯಲ್ಲಿ ಸಹಕರಿಸಿದ ಎಲ್ಲರನ್ನೂ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷ ಪ್ರಸಾದ್ ಪಲಿಮಾರು ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಅಂಗನವಾಡಿ ಕಾರ್ಯಕರ್ತೆ ಲತಾ ಅಶೋಕ್ ಅವರ ಅಚ್ಚುಕಟ್ಟಾದ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅಂಬಿಕಾ ಸುರೇಶ್ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಬಳಿಕ ಆಗಮಿಸಿದ ಅತಿಥಿಗಳು, ಬಂಧುಗಳು ಹಾಗೂ ಶಾಲಾ ಮಕ್ಕಳಿಗೆ 25 ಬಗೆಯ ಅಡುಗೆ ಪದಾರ್ಥಗಳನ್ನು ಒಳಗೊಂಡ ವಿಶೇಷ ಊಟೋಪಚಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಅಡ್ವೆ ಘಟಕದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.







