ಮಾಣಿ ಸೆಪ್ಟೆಂಬರ್ 6 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆ. 6ರಂದು ಕೆದಿಲ ಗ್ರಾಮದ ಗಾಯತ್ರಿ ಮಾಧವ ಸುವರ್ಣ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಜನಾರ್ಧನ ಪೂಜಾರಿ ಕೊಡಂಗೆ ಹಾಗೂ ತಂಡದವರ ನೇತೃತ್ವದಲ್ಲಿ ಭಕ್ತಿಭಾವದಿಂದ ಭಜನೆ ಸಂಕೀರ್ತನೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಬಲ್ಯ ಅವರು, ಶ್ರೀ ನಾರಾಯಣ ಗುರುಗಳು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗೆ ಕಾರಣರಾದರು. ಸರಳತೆ, ಸಮಾನತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಗುರುಗಳು ಸಮಾಜದಲ್ಲಿನ ಜಾತಿಭೇದ ಮತ್ತು ಅಸಮಾನತೆಗಳನ್ನು ದೂರ ಮಾಡಿ, ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸಿದರು ಎಂದು ಹೇಳಿದರು.
ಕುದ್ರೋಳಿ ಕ್ಷೇತ್ರವೂ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಸಾರುವ ಪ್ರಮುಖ ಕ್ಷೇತ್ರವಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.), ಕೆದಿಲ ಇದರ ಗೌರವಾಧ್ಯಕ್ಷ ಮಾರಪ್ಪ ಸುವರ್ಣ ಮಾತನಾಡಿ, ನಾರಾಯಣ ಗುರುಗಳ ಸಂದೇಶವನ್ನು ಮನೆಮನೆಗೆ ತಲುಪಿಸುವ ಯುವವಾಹಿನಿಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ವಿಶ್ವಗುರು ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಸಮಾಜದ ಪ್ರತಿಯೊಂದು ಮನೆಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ನಾರಾಯಣ ಗುರು ತತ್ವ ಸಂದೇಶ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ವಂದಿಸಿದರು. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







