ಮಂಗಳೂರು ಸೆಪ್ಟೆಂಬರ್ 7 : ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಷನ್, ಮಂಗಳೂರು ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಹಯೋಗದಲ್ಲಿ ಹತ್ತು ದಿನಗಳ ಕಾಲ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೆ. 7ರಂದು ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ತರಬೇತಿ ಕಾರ್ಯಾಗಾರದ ಆರಂಭದ ದಿನಗಳಿಗೆ ಹೋಲಿಸಿದರೆ ಇದೀಗ ಪ್ರತಿಯೊಬ್ಬ ಅಭ್ಯರ್ಥಿಯಲ್ಲೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಪ್ರತಿಯೊಬ್ಬರಲ್ಲೂ ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಯಾಗಬೇಕೆಂಬ ಕನಸು ಎದ್ದು ಕಾಣುತ್ತಿದೆ. ಇದು ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಉದ್ಯಮಶೀಲತೆಯ ಪರಿಕಲ್ಪನೆ, ಹಣಕಾಸು ನಿರ್ವಹಣೆ, ಮಾರುಕಟ್ಟೆ ತಂತ್ರಗಳು, ಸರಕಾರದ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ಅತ್ಯುತ್ತಮ ತರಬೇತಿ ನೀಡಿದ ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಯೆಲಿಗಾರ್, ತರಬೇತುದಾರರಾದ ಪ್ರವೀಷಾ ಕುಕ್ಯಾನ್, ವಿದ್ಯಾ ಹಾಗೂ ಜೀವನ್ ಕೊಲ್ಯ ಅವರಿಗೆ ಮಂಗಳೂರು ಘಟಕದ ಪರವಾಗಿ ಧನ್ಯವಾದ ಸಲ್ಲಿಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳು ಉತ್ಸಾಹದಿಂದ ಕೂಡಿದ್ದು, ಯಶಸ್ವಿ ಉದ್ಯಮಿಯಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಉತ್ತಮ ಅವಕಾಶವಾಗಿದೆ. ತರಬೇತಿಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.
ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಯೆಲಿಗಾರ್ ಮಾತನಾಡಿ, ಕರ್ನಾಟಕದಾದ್ಯಂತ ಸಂಸ್ಥೆಯ ವತಿಯಿಂದ ಇಂತಹ ಹಲವು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ಸ್ವಂತ ಉದ್ಯಮಿಗಳಾಗಿ ಸ್ವಾವಲಂಬಿಗಳಾಗಬೇಕು ಎಂಬುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಮುಂದೆಯೂ ಯಾವುದೇ ಸಹಕಾರದ ಅಗತ್ಯವಿದ್ದಲ್ಲಿ ಸಿಡಾಕ್ ಅನ್ನು ಸಂಪರ್ಕಿಸಬಹುದು ಎಂದರು.
ಜನಪರವಾದ ಇಂತಹ ಉತ್ತಮ ತರಬೇತಿ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಿದ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೆ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಅತಿಥಿಗಳ ಮೂಲಕ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಯುವವಾಹಿನಿ (ರಿ.) ಮಂಗಳೂರು ಘಟಕದ ಕಾರ್ಯದರ್ಶಿ ಉಷಾ ಕೆ. ಉಪಸ್ಥಿತರಿದ್ದರು. ಪ್ರವೀಷಾ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ವಂದಿಸಿದರು.







