ಮುಲ್ಕಿ: ಯುವವಾಹಿನಿ (ರಿ.) ಮುಲ್ಕಿ ಘಟಕವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹರಿಂದ್ರ ಸುವರ್ಣ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುವುದರೊಂದಿಗೆ ನಾಲ್ವರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು. ಅಲ್ಲದೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ ಶೇ. 100ರಷ್ಟು ಫಲಿತಾಂಶ ಪಡೆಯುವಲ್ಲಿ ಶಾಲೆಯ ಎಲ್ಲಾ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳ ಶಿಸ್ತು ಹಾಗೂ ಉತ್ತಮ ನಡವಳಿಕೆಯನ್ನು ಪ್ರಶಂಸಿಸಿದ ಅವರು, ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿತ್ರಿ ಹಾಗೂ ವಾಣಿ ಮಧುಕರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮುಲ್ಕಿ ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಟ್ರಸ್ಟಿ ಯೋಗೀಶ್ ಕೋಟ್ಯಾನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು, ಆಡಳಿತಾಧಿಕಾರಿ ಮಂಜುಳಾ ಕೆ.ವಿ., ಪ್ರಾಂಶುಪಾಲ ಯತೀಶ್ ಅಮೀನ್, ಮುಖ್ಯೋಪಾಧ್ಯಾಯಿನಿ ಗೀತಾ ಶೆಟ್ಟಿ ಹಾಗೂ ಘಟಕದ ಕಾರ್ಯದರ್ಶಿ ವೇದಾ ಜಯ ಕುಬೇವೂರು ಉಪಸ್ಥಿತರಿದ್ದರು.
ಘಟಕಾಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸತೀಶ್ ಕಿಲ್ಪಾಡಿ ಹಾಗೂ ಜಯಕುಮಾರ್ ಕುಬೇವೂರು ಸನ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲ ಯತೀಶ್ ಅಮೀನ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.







