ಮಂಗಳೂರು, ಸೆ. 1: ನಾರಾಯಣ ಗುರುಗಳ ತತ್ವ ಹಾಗೂ ಆದರ್ಶಗಳನ್ನು ಪಾಲಿಸುವ ಮೊದಲು ಅವುಗಳ ಮೂಲ ಅದ್ವೈತದ ಅರ್ಥವನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯ ಎಂದು ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.)ನ ಟ್ರಸ್ಟಿ ವರದರಾಜ್ ಮಟ್ಟು ಕಟಪಾಡಿ ಹೇಳಿದರು. ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆ. 1ರಂದು ನಡೆದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದ ಅವರು ಮಾತನಾಡಿದರು.

ನಾರಾಯಣ ಗುರುಗಳು ಪವಾಡ ಪುರುಷರು, ಮಹಾ ತಪಸ್ವಿಗಳು ಹಾಗೂ ಮಹಾನ್ ಸಮಾಜ ಸುಧಾರಕರಾಗಿದ್ದರು. ಕುದ್ರೋಳಿ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ಅದ್ವೈತ ತತ್ವದ ನೆಲೆಯಲ್ಲಿ ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದರು. ನಾರಾಯಣ ಗುರುಗಳು ಹೊರನೋಟಕ್ಕೆ ಸರಳವಾಗಿ ಕಾಣಿಸಿಕೊಂಡರೂ, ಅವರ ಆಧ್ಯಾತ್ಮಿಕ ಮಹತ್ವವನ್ನು ಅರಿತಾಗ ಅವರ ನಿಜವಾದ ಮಹಿಮೆ ತಿಳಿಯುತ್ತದೆ ಎಂದರು.
“ದೈವದಶಕಂ ಕೇವಲ ಪ್ರಾರ್ಥನೆಯಲ್ಲ; ಅದು ನಾರಾಯಣ ಗುರುಗಳ ತತ್ವ ಹಾಗೂ ಪರಿಚಯವನ್ನು ತಿಳಿಸುವ ಮಹತ್ವದ ಕೃತಿ. ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಗುರುಗಳ ಸಂದೇಶದ ಮೂಲ ಅರ್ಥವನ್ನು ಅರಿಯಬೇಕು. ನನ್ನ ಆತ್ಮ ಮತ್ತು ನಿನ್ನ ಆತ್ಮ ಒಂದೇ ಎಂಬುದೇ ಅದ್ವೈತದ ಮೂಲ ಆಶಯ. ಇಂದು ‘ಒಂದೇ ಜಾತಿ, ಒಂದೇ ಮತ’ ಎಂಬುದು ಕೇವಲ ರಾಜಕೀಯ ಘೋಷಣೆಯಾಗಿ ಉಳಿಯದೆ, ಅದರ ನಿಜವಾದ ತಾತ್ವಿಕ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು. ವಿದ್ಯೆ, ಉದ್ಯೋಗ ಹಾಗೂ ಸಂಪರ್ಕ ಎಂಬ ಧ್ಯೇಯಗಳನ್ನು ಹೊಂದಿರುವ ಯುವವಾಹಿನಿ ಸಂಘಟನೆಯು ನಾರಾಯಣ ಗುರುಗಳ ತತ್ವಾದರ್ಶಗಳನ್ನು ಸಮಾಜದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಮುಂದೆಯೂ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ಗುರುಪೂಜೆ ಹಾಗೂ ಗ್ರಂಥ ಬಿಡುಗಡೆ
ಕಾರ್ಯಕ್ರಮದ ಉದ್ಘಾಟನೆಯನ್ನು B.E.W.S. (ರಿ.) ಮಂಗಳೂರಿನ ಸಲಹೆಗಾರ ಶ್ರೀಧರ ಪೂಜಾರಿ ಕೂಳೂರು ನೆರವೇರಿಸಿ ಶುಭ ಹಾರೈಸಿದರು. ಸಂಜೆ 6.30ಕ್ಕೆ ಅಷ್ಟೋತ್ತರ ಪಠಣ ಹಾಗೂ ಗುರುಪೂಜೆ ನೆರವೇರಿಸಿ ಭಕ್ತಿಪೂರ್ವಕವಾಗಿ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳ ಮೂಲಕ “ಲೋಕದ ಕಲ್ಯಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ನಿತ್ಯ ಪಾರಾಯಣ ಗ್ರಂಥ” ಬಿಡುಗಡೆಗೊಳಿಸಲಾಯಿತು.
ರಕ್ಷಾ ಬಂಧನ, ಭಜನಾ ತಂಡಕ್ಕೆ ಗೌರವ : ನಾರಾಯಣ ಗುರು ಜಯಂತಿಯ ಅಂಗವಾಗಿ ರಕ್ಷಾ ಬಂಧನವನ್ನೂ ಆಚರಿಸಲಾಯಿತು. ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡು ಅವರು ರಕ್ಷಾ ಬಂಧನದ ಮಹತ್ವ ಹಾಗೂ ಹಿನ್ನೆಲೆಯನ್ನು ವಿವರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸದಸ್ಯರು ಪರಸ್ಪರ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಶ್ರೀಕಾಂತ್ ಅಂಚನ್ ಹಾಗೂ ಮೋಹನ್ ದಾಸ್ ಮಾಲೆಮಾರ್ ಸಹಕರಿಸಿದರು.
ಮಾಧವ ಕೀರ್ತನೋತ್ಸವ ಭಜನಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜನರ ಹಾಗೂ ನಮ್ಮ ಕುಡ್ಲ ವೀಕ್ಷಕರ ಮೆಚ್ಚುಗೆ ಗಳಿಸಿದ ಯುವವಾಹಿನಿ ಮಂಗಳೂರು ಘಟಕದ ಭಜನಾ ತಂಡದ ಸಂಚಾಲಕ ಹಾಗೂ ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡು ಹಾಗೂ ಭಜನಾ ತಂಡದ ಸದಸ್ಯರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಘಟಕದ ಶಿಕ್ಷಕರು, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ಹಾಗೂ ಭಜನಾ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 92.2 ಅಂಕ ಗಳಿಸಿದ ಜ್ಞಾನ್ ಸಿ. ಕರ್ಕೇರ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99.17 ಅಂಕ ಗಳಿಸಿದ ದಶಾ ಆರ್. ಪಿ. ಅವರು ಘಟಕದ ಸದಸ್ಯರ ಮಕ್ಕಳಾಗಿದ್ದು, ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೇಂಜಳ, ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಗೋಪಾಲ ಪೂಜಾರಿ ಭಾಗವಹಿಸಿ ನಾರಾಯಣ ಗುರುಗಳ ಮಹಿಮೆ ಹಾಗೂ ತತ್ವಾದರ್ಶಗಳ ಕುರಿತು ಮಾತನಾಡಿ ಶುಭ ಹಾರೈಸಿದರು.
ಸಂಘಟನೆಯಲ್ಲಿ ಒಗ್ಗಟ್ಟು ಅಗತ್ಯ : ಹರೀಶ್ ಕೆ. ಸುವರ್ಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ನಾರಾಯಣ ಗುರುಗಳು ಸಂಘಟನೆಯ ಮೂಲಕ ಬಲಯುತರಾಗುವ ಸಂದೇಶವನ್ನು ನೀಡಿದ್ದಾರೆ. ಆದರೆ ಇಂದು ಹಲವು ಸಂಘಟನೆಗಳಲ್ಲಿ ಸ್ವಾರ್ಥ ಮನೋಭಾವನೆ ಹೆಚ್ಚಾಗಿರುವುದು ವಿಷಾದನೀಯ. ಎಲ್ಲರೂ ನಾರಾಯಣ ಗುರುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರೂ, ಅವರ ತತ್ವಾದರ್ಶಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಪಾಲಿಸುವ ಅಗತ್ಯವಿದೆ ಎಂದರು.
“ಎಲ್ಲರೂ ಒಗ್ಗಟ್ಟಿನಿಂದ, ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದರೆ ಸಂಘಟನೆ ಇನ್ನಷ್ಟು ಬಲಿಷ್ಠವಾಗುತ್ತದೆ. ಇತರ ಸಮುದಾಯಗಳ ಸಂಘಟನೆಗಳಲ್ಲಿ ಕಂಡುಬರುವ ಹೊಂದಾಣಿಕೆ ನಮ್ಮಲ್ಲೂ ಮೂಡಬೇಕು. ಬಿಲ್ಲವ ಸಂಘಟನೆಗಳು ಇನ್ನಷ್ಟು ಗಟ್ಟಿಯಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಸ್ವಾರ್ಥ ಮನೋಭಾವವನ್ನು ಬದಿಗಿಟ್ಟು ಸಹಕಾರ ನೀಡಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದ ಘಟಕದ ಸದಸ್ಯರನ್ನು ಅತಿಥಿಗಳ ಮೂಲಕ ಗೌರವಿಸಲಾಯಿತು. ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಮಾಜಿ ಅಧ್ಯಕ್ಷರು, ನಿರ್ದೇಶಕರು, ಮಂಗಳೂರು ಘಟಕ ಹಾಗೂ ವಿವಿಧ ಘಟಕಗಳ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಯುವವಾಹಿನಿಯ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾರಿಕಾ ಬಿ. ಎಚ್. ಉಜ್ಜೋಡಿ ಅವರು ನಾರಾಯಣ ಗುರುಗಳ ದೈವದಶಕಂ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಉಷಾ ಕೆ. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ರಾಕೇಶ್ ಕುಮಾರ್ ನಿರೂಪಿಸಿದರು. ಘಟಕದ ಉಪಾಧ್ಯಕ್ಷರಾದ ಯತೀಶ್ ಬಳಂಜಾ ಹಾಗೂ ಮಹೇಶ್ ಅಮೀನ್ ಅಭಿನಂದನಾ ಪತ್ರ ವಾಚಿಸಿದರು. ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ಧನ್ಯವಾದ ಅರ್ಪಿಸಿದರು.
ಲೋಕ ಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.







