ಉಪ್ಪಿನಂಗಡಿ ಅಗಸ್ಟ್ 30 : ಮಾನವ ಕುಲಕ್ಕೆ ಜ್ಞಾನದ ಬೆಳಕನ್ನು ಪಸರಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ವಿವಿಧ ಸಮಾಜಗಳ ಮುಖಂಡರ ಸಹಭಾಗಿತ್ವದೊಂದಿಗೆ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಆಗಸ್ಟ್ 30ರಂದು ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವ ಮಾನವ ಕುಲವನ್ನು ಗೌರವಿಸುವ ಹಾಗೂ ಸಮಾನತೆಯ ಸಂದೇಶ ಸಾರಿದ ನಾರಾಯಣ ಗುರುಗಳ ಜಯಂತಿಯ ಮಹತ್ವವನ್ನು ವಿವರಿಸಿ ಎಲ್ಲರನ್ನು ಸ್ವಾಗತಿಸಿದರು.
ಶ್ರೀ ಷಣ್ಮುಖ ದೇವಸ್ಥಾನ, ಕಾಂಚನ ಪೆರ್ಲ ಇದರ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ಧನ್ಯಕುಮಾರ್ ರೈ ಅವರು, ನಾರಾಯಣ ಗುರುಗಳು ಮಹಾನ್ ಸಾಮಾಜಿಕ ಕ್ರಾಂತಿಕಾರರಾಗಿದ್ದು, ಅವರ ಸಂದೇಶಗಳು ಇಂದಿಗೂ ಅನುಕರಣೀಯವಾಗಿವೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಗುರುಗಳ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಆಯೋಜಿಸುವ ಮೂಲಕ ಗುರುಗಳ ಸಂದೇಶವನ್ನು ಯುವ ಮನಸ್ಸುಗಳಲ್ಲಿ ಅಚ್ಚೊತ್ತಲು ಯುವವಾಹಿನಿ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಕರುಣಾಕರ ಸುವರ್ಣ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅಶಕ್ತರಿಗೆ ಆಹಾರ ಕಿಟ್ ವಿತರಿಸುವ ಮೂಲಕ ನಾರಾಯಣ ಗುರು ಜಯಂತಿಯನ್ನು ಯುವವಾಹಿನಿ ಘಟಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಸಂದೇಶ ನೀಡುತ್ತದೆ ಎಂದು ಹೇಳಿದರು. ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಇಲ್ಲಿನ ಉಪನ್ಯಾಸಕ ಶಿವರಾಜ್ ಗಟ್ಟಿ ಅವರು ಗುರು ಸಂದೇಶವನ್ನು ವಿವರಿಸುತ್ತಾ, ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ; ಅವರು ಸರ್ವ ಮಾನವ ಕುಲದ ಗುರುಗಳಾಗಿದ್ದಾರೆ. ಅವರ ಸಂದೇಶಗಳು ಎಲ್ಲರಿಗೂ ಸ್ಫೂರ್ತಿದಾಯಕ ಹಾಗೂ ಅನುಕರಣೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಗುರು ಸಂದೇಶದ ಅರಿವು
ಉಪ್ಪಿನಂಗಡಿ ಯುವವಾಹಿನಿ ಘಟಕದ ವ್ಯಾಪ್ತಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ “ಅಸ್ಪೃಶ್ಯತೆ ನಿವಾರಣೆಗೆ ನಾರಾಯಣ ಗುರುಗಳ ಕೊಡುಗೆ” ಹಾಗೂ ಪ್ರೌಢಶಾಲಾ ವಿಭಾಗದಲ್ಲಿ “ಸ್ವಾಸ್ಥ್ಯ ಸಮಾಜಕ್ಕಾಗಿ ನಾರಾಯಣ ಗುರುಗಳ ಸಂದೇಶ” ಎಂಬ ವಿಷಯಗಳ ಕುರಿತು ಮುಕ್ತವಾಗಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯ ಅಂತಿಮ ಸುತ್ತು ನಡೆಯಿತು.
ಪ್ರಾಥಮಿಕ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿಯ ಹೃಷಿಕೇಶ್ ಪ್ರಥಮ ಹಾಗೂ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡೆತಡ್ಕದ ಚಾರ್ವಿ ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿಯ ಆದಿತ್ರಿ ಮುರಳೀಧರ ಪೆರಿಯಡ್ಕ ಪ್ರಥಮ ಹಾಗೂ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿಯ ಜಶ್ಮಿತಾ ದ್ವಿತೀಯ ಸ್ಥಾನ ಪಡೆದರು.
ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದೊಂದಿಗೆ ಗೌರವ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ತೀರ್ಪುಗಾರರಾಗಿ ಶಿವರಾಜ್ ಗಟ್ಟಿ, ಸುನೀತಾ ಹಾಗೂ ವನಿತಾ ಕೃಷ್ಣಪ್ಪ ಸಹಕರಿಸಿದರು.
ಐದು ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ನಾರಾಯಣ ಗುರುಗಳ ಸಮಾನತೆಯ ಸಂದೇಶದಂತೆ ಜಾತ್ಯತೀತವಾಗಿ ಐದು ಅಶಕ್ತ ಬಡ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಅದೇ ರೀತಿ “ವಿದ್ಯೆಯಿಂದ ಸ್ವತಂತ್ರರಾಗಿ” ಎಂಬ ಗುರುಗಳ ಸಂದೇಶದ ಆಶಯದಂತೆ, ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಸ್ಥಿತಿಯಲ್ಲಿದ್ದ ಗಾಯತ್ರಿ ಎಂಬ ವಿದ್ಯಾರ್ಥಿನಿಯ ವಿದ್ಯಾಭ್ಯಾಸ ಮುಂದುವರಿಸಲು ವಿದ್ಯಾರ್ಥಿವೇತನ ವಿತರಿಸಲಾಯಿತು. ಮೂಡಬಿದಿರೆಯ ಮೂರ್ತೆದಾರರ ಬ್ಯಾಂಕ್‌ನಲ್ಲಿ ಸುದೀರ್ಘ 31 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಯಶೋಧರ ಅವರು ವಿದ್ಯಾರ್ಥಿವೇತನವನ್ನು ನೀಡಿದರು.
ವಿವಿಧ ಗಣ್ಯರಿಂದ ಶುಭ ಹಾರೈಕೆ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಡಾ. ನಿರಂಜನ್ ರೈ, ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಡಾ. ರಾಜಾರಾಮ್ ಕೆ. ಬಿ., ಡಾ. ಸದಾನಂದ ಕುಂದರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್ ಪಾಲೇರಿ, ಯುವವಾಹಿನಿ ಘಟಕದ ಗೌರವ ಸಲಹೆಗಾರ ವರದರಾಜ್ ಎಂ. ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ ಅವರು ಭಾಗವಹಿಸಿ ಶುಭ ಹಾರೈಸಿದರು. ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಭಿಜ್ಞಾ ಪ್ರಾರ್ಥಿಸಿದರು. ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಲಿಖಿತ್ ಎಂ. ಜಿ. ಧನ್ಯವಾದ ಸಲ್ಲಿಸಿದರು. ಜೊತೆ ಕಾರ್ಯದರ್ಶಿ ನಯನಾ ಮನೋಹರ್ ಹಾಗೂ ಸದಸ್ಯ ಸುನೀಲ್ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು.






