ಕೊಲ್ಯ ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿಯು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಹಾಗೂ ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯದ ಆಶ್ರಯದಲ್ಲಿ, ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಸಹಭಾಗಿತ್ವದಲ್ಲಿ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಕ್ತಿಭಾವದಿಂದ ನಡೆಯಿತು.

ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಯ ಇದರ ಅಧ್ಯಕ್ಷರಾದ ಚಂದ್ರಹಾಸ ಪಂಡಿತ್ ಹೌಸ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಅವರು ಮಾತನಾಡಿ, “ನಮ್ಮ ಧರ್ಮವನ್ನು ಪ್ರೀತಿಸಿ, ಅನ್ಯ ಧರ್ಮಗಳನ್ನು ಗೌರವಿಸೋಣ” ಎಂಬ ಸಂದೇಶ ನೀಡಿದರು.
ಲೆಕ್ಕ ಪರಿಶೋಧಕರಾದ ಸಿ.ಎ. ಶ್ರೀವತ್ಸ ಎನ್. ಬಲ್ಲಕುರಾಯ, ಆತ್ಮಶಕ್ತಿ ಪತ್ರಿಕೆಯ ಸಹಾಯಕ ಸಂಪಾದಕರಾದ ವಿಶ್ವನಾಥ ಪೂಜಾರಿ ಕೆಂಜಾರು ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಪ್ರಧಾನ ಕಾರ್ಯದರ್ಶಿ ಜಯಾನಂದ ಎಂ. ಅವರು ‘ಗುರುಸಂದೇಶ’ ನೀಡುತ್ತಾ, “ನಾರಾಯಣ ಗುರುಗಳ ತತ್ವ ಹಾಗೂ ಆದರ್ಶಗಳನ್ನು ಪಾಲಿಸುವುದು, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಆಚರಿಸುವುದು ಇಂದಿನ ಯುವಜನಾಂಗಕ್ಕೆ ಅತ್ಯಂತ ಅಗತ್ಯ. ದಿನನಿತ್ಯ ದೇವರ ಪೂಜೆ ಮಾಡಿದರೂ, ಮನುಷ್ಯ ಕೆಲವೊಂದು ಸಂದರ್ಭಗಳಲ್ಲಿ ಮಾನವೀಯತೆಯನ್ನು ಮರೆತು ಬದುಕುತ್ತಿರುವುದು ತೀರಾ ವಿಷಾದನೀಯ” ಎಂದು ಹೇಳಿದರು.
17 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ 17 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ರಕ್ಷಿತ್ ಕುಮಾರ್ ಜೆ. ಅವರನ್ನು ಸನ್ಮಾನಿಸಲಾಯಿತು.
ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಅಧ್ಯಕ್ಷರಾದ ಗೋಪಾಲ ಕೊಂಡಾಣ, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷರಾದ ತ್ರಿವೇಣಿ ಉದಯ್ ಕುಂಪಲ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಅವರು ಗುರುಜಯಂತಿಯ ಪ್ರಯುಕ್ತ ಶುಭ ಹಾರೈಸಿದರು.
ಗುರುಜಯಂತಿಯ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಉಳ್ಳಾಲ ವಲಯದ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಸಂಚಾಲಕರಾದ ಜೀವನ್ ಕೊಲ್ಯ ಅವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾದ ರಘುರಾಮ್ ಸುವರ್ಣ ಹಾಗೂ ಗಂಗಾಧರ ಕುಜುಮಗದ್ದೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಅಧ್ಯಕ್ಷರಾದ ಶೇಷಪ್ಪ ಬೈದ್ಯಮನೆ ಪ್ರಸ್ತಾವನೆ ಹಾಗೂ ಸ್ವಾಗತ ನೆರವೇರಿಸಿದರು. ನಾರಾಯಣ ಗುರು ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಕಾರ್ಯದರ್ಶಿ ಸುಂದರ್ ಸುವರ್ಣ ಧನ್ಯವಾದ ಸಮರ್ಪಿಸಿದರು. ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಕುಸುಮಾಕರ ಕುಂಪಲ ಹಾಗೂ ಕೇಂದ್ರ ಸಮಿತಿಯ ಯುವಸಿಂಚನ ಸಂಪಾದಕ ಮಂಡಳಿ ಸದಸ್ಯರು ಮತ್ತು ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಲತೀಶ್ ಎಂ. ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾರಾಯಣ ಗುರು ಯಕ್ಷಗಾನ ಕಲಾ ಸಂಘ, ಕೊಲ್ಯ ಇವರಿಂದ ‘ಬ್ರಾಣೆ ಶರ್ತ್’ ಯಕ್ಷಗಾನ ತಾಳಮದ್ದಳೆ ನಡೆಯಿತು.







