ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಮರೋಳಿಯ ‘ಶ್ರೀ ಮಾತಾ ಹಿರಿಯ ನಾಗರಿಕರ ಆರೋಗ್ಯ ಕೇಂದ್ರ’ದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಆಯೋಜಿಸಿ, ಗುರುಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗುರುದೇವರ ಸೇವಾ ಸಂದೇಶವನ್ನು ಸ್ಮರಿಸುತ್ತಾ ಆಯೋಜಿಸಲಾದ ಕಾರ್ಯಕ್ರಮವನ್ನು ಶ್ರೀ ಮಾತಾ ಹಿರಿಯ ನಾಗರಿಕರ ಆರೋಗ್ಯ ಕೇಂದ್ರದ ವ್ಯವಸ್ಥಾಪಕರಾದ ಪವಿತ್ರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ‘ಮಾತೃ ಸ್ಪರ್ಶ’ ಸಂಪಾದಕರಾದ ಸುಮಂಗಲ ಸಿ. ಕೋಟ್ಯಾನ್ ಪ್ರಾರ್ಥಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಘಟಕದ ಅಧ್ಯಕ್ಷರಾದ ಗೀತಾ ವಸಂತ್ ಸ್ವಾಗತಿಸಿದರು. ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕರಾದ ಮಧುಶ್ರೀ ಪ್ರಶಾಂತ್, ಕಾರ್ಯದರ್ಶಿ ವಂದೀಪ್, ಶ್ರೀ ಮಾತಾ ಆರೋಗ್ಯ ಕೇಂದ್ರದ ವ್ಯವಸ್ಥಾಪಕರಾದ ಪವಿತ್ರ ಹಾಗೂ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಉಪಸ್ಥಿತರಿದ್ದರು. ಸಂಚಾಲಕರು ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಬೆರೆತು ಸಮಯ ಕಳೆಯುವ ಮೂಲಕ ಕಾರ್ಯಕ್ರಮವು ಸಂತಸ ಹಾಗೂ ಮಾನವೀಯ ಸ್ಪಂದನೆಯ ಕ್ಷಣಗಳಿಗೆ ಸಾಕ್ಷಿಯಾಯಿತು.
ಘಟಕದ ಮಾಜಿ ಅಧ್ಯಕ್ಷರು, ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವಾ ಕೈಂಕರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕಾರ್ಯಕ್ರಮವನ್ನು ಶ್ರೀ ಗುರುದೇವರ ಪಾದಚರಣಗಳಿಗೆ ಸಮರ್ಪಿಸುವ ಮೂಲಕ ಗುರುಜಯಂತಿಯನ್ನು ಸಮಾಜಮುಖಿ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.







