ಅಡ್ವೆ ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಆಗಸ್ಟ್ 28ರಂದು ಸಂಜೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಅಡ್ವೆಯಲ್ಲಿ ಭಜನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಶ್ರೀ ಬ್ರಹ್ಮ ಬೈದರ್ಕಳ ಭಜನಾ ಮಂಡಳಿ, ಯುವವಾಹಿನಿ ಸದಸ್ಯರು ಹಾಗೂ ಸಮಾಜ ಬಾಂಧವರು ಒಗ್ಗೂಡಿ ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು. ಗರಡಿಯನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿದ್ದು, ಸಂಜೆ 7 ಗಂಟೆಗೆ ಕಲಶ ಪ್ರತಿಷ್ಠಾಪನೆಯ ವಿಧಿ ವಿಧಾನಗಳೊಂದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅರ್ಚಕರಾದ ಸದಾನಂದ ಪೂಜಾರಿ ಅವರು ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ–ಗಂಧ ಹಾಗೂ ಪ್ರಸಾದ ವಿತರಿಸಿದರು. ಬಳಿಕ ಗುರುದೇವರ ಸ್ಮರಣೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಗೌರವ ಸಲಹೆಗಾರರು, ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾದರು.


