ಮಂಗಳೂರು ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಗಸ್ಟ್ 28ರಂದು ಸಂಜೆ 6.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುಪೂಜೆ ನೆರವೇರಿಸಲಾಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯ ಹಾಗೂ ಬಿಲ್ಲವ ಸಮಾಜದ ಸಂಘಟಿತ ಪ್ರಯತ್ನದ ಪ್ರತೀಕವಾಗಿ ರೂಪುಗೊಂಡ ಕ್ಷೇತ್ರವಾಗಿದೆ. 1908ರಲ್ಲಿ ಬಿಲ್ಲವ ಸಮಾಜದ ಮುಖಂಡ ಹಾಗೂ ಉದ್ಯಮಿ ಹೋಯ್ಗೆ ಬಜಾರ್ ಕೊರಗಪ್ಪ ಅವರು ಕೇರಳಕ್ಕೆ ತೆರಳಿ ನಾರಾಯಣ ಗುರುಗಳನ್ನು ಭೇಟಿಯಾಗಿ, ಸಮಾಜಕ್ಕಾಗಿ ದೇವಸ್ಥಾನವೊಂದನ್ನು ನಿರ್ಮಿಸುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ನಾರಾಯಣ ಗುರುಗಳು ಶಿವಲಿಂಗವನ್ನು ತಂದು 1912ರ ಫೆಬ್ರವರಿಯಲ್ಲಿ ಸ್ವತಃ ಪ್ರತಿಷ್ಠಾಪಿಸಿ, ಕ್ಷೇತ್ರಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರ ಎಂದು ನಾಮಕರಣ ಮಾಡಿದರು ಎಂಬುದು ಕ್ಷೇತ್ರದ ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಸಾಮಾಜಿಕ ಅಸಮಾನತೆ ಹಾಗೂ ದೇವಸ್ಥಾನ ಪ್ರವೇಶದ ನಿರ್ಬಂಧಗಳಿದ್ದ ಕಾಲಘಟ್ಟದಲ್ಲಿ ಸ್ಥಾಪನೆಯಾದ ಈ ಕ್ಷೇತ್ರವು ಇಂದು ಸಮಾನತೆ, ಸಹೋದರತ್ವ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಸಾರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ನಾರಾಯಣ ಗುರುಗಳ “ಒಂದು ಜಾತಿ, ಒಂದು ಮತ, ಒಂದು ದೇವರು” ಎಂಬ ಸಂದೇಶದ ಆಶಯವನ್ನು ಪ್ರತಿಬಿಂಬಿಸುವ ಕ್ಷೇತ್ರವಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವು ಬೆಳೆದು ಬಂದಿದೆ.
ಗುರುಜಯಂತಿಯ ಅಂಗವಾಗಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕುದ್ರೋಳಿ ಕ್ಷೇತ್ರದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ಹೂವಿನ ಮಾಲೆ ಸಮರ್ಪಿಸಿ ಗುರುಪೂಜೆ ಸಲ್ಲಿಸಲಾಯಿತು. ಗುರುಗಳ ತತ್ವಾದರ್ಶಗಳನ್ನು ಸ್ಮರಿಸಿ, ಅವರ ಸಾಮಾಜಿಕ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







