ಮಾಣಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿಯೇ ವಿದ್ಯೆ, ಸಂಘಟನೆ ಹಾಗೂ ಸಾಮಾಜಿಕ ಬದ್ಧತೆಗೆ ಹೆಚ್ಚಿನ ಒತ್ತು ನೀಡಿದ ಮಹಾನ್ ಚಿಂತಕರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದ ಅವರು, ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು, ಯಾರನ್ನೂ ಕೀಳು–ಮೇಲು ಎಂಬ ಭೇದದಿಂದ ನೋಡಬಾರದು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದು ಯುವವಾಹಿನಿ (ರಿ.)ಯ ರಾಜೇಶ್ ಬಲ್ಯ ಹೇಳಿದರು.

ಆಗಸ್ಟ್ 30ರಂದು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುರೇಶ್ ಬಾಕಿಲ ಅವರ ಮನೆಯಲ್ಲಿ ಆಯೋಜಿಸಿದ್ದ ‘ಮನೆ ಮನೆಗೆ ಗುರುತತ್ವ ಸಂದೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಾಗದ ಕಾರ್ಯವನ್ನು ಸಂಘಟನೆಯ ಮೂಲಕ ಸಾಧಿಸಬಹುದು. ಸಂಘಟನೆಯು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ನೀಡುತ್ತದೆ. ಎಲ್ಲರೂ ಒಗ್ಗಟ್ಟಾಗಿ, ಒಂದೇ ಮನಸ್ಸಿನಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿದಾಗ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ನಾರಾಯಣ ಗುರುಗಳು ಸಾರಿದ್ದಾರೆ” ಎಂದರು.
ಬಳಿಕ ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಮಾತನಾಡಿ, ಯುವವಾಹಿನಿ (ರಿ.) ಮಾಣಿ ಘಟಕವು ಕಳೆದ ಎರಡು–ಮೂರು ವರ್ಷಗಳಿಂದ ‘ಮನೆ ಮನೆಗೆ ಗುರುತತ್ವ ಸಂದೇಶ’ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಗುರುಗಳ ತತ್ವಾದರ್ಶಗಳು, ಅವರು ಸಮಾಜದಲ್ಲಿ ತಂದ ಸಾಮಾಜಿಕ ಕ್ರಾಂತಿ ಹಾಗೂ ಜಗತ್ತಿಗೆ ಸಾರಿದ ಸಂದೇಶಗಳನ್ನು ಪ್ರತಿಯೊಂದು ಮನೆ ಹಾಗೂ ಮನಗಳಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ನಾರಾಯಣ ಗುರುಗಳು ಎಲ್ಲ ಸಮಾಜದ ಗುರುಗಳಾಗಿದ್ದು, ಅವರ ಜೀವನ ಹಾಗೂ ಚರಿತ್ರೆಯನ್ನು ತಿಳಿದುಕೊಳ್ಳುವುದರ ಜೊತೆಗೆ ಇತರರಿಗೂ ತಿಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಘಟಕದ ನಾರಾಯಣ ಗುರುತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಶ್ರೀಧರ ಮುಜಲಾ, ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ಕಟ್ಟಡ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಗೌರವಾನ್ವಿತ ಸದಸ್ಯರು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ದರ್ಖಾಸು ಸ್ವಾಗತಿಸಿದರು. ಡಾ. ತ್ರಿವೇಣಿ ರಮೇಶ್ ಮುಜಾಲ ವಂದನಾರ್ಪಣೆ ಸಲ್ಲಿಸಿದರು.


