ಪಡುಬಿದ್ರಿ ಅಗಸ್ಟ್ 30 : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವು ಆಗಸ್ಟ್ 30ರಂದು ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪಿ.ಕೆ. ಮನೋಜ್ ಪೂಜಾರಿ ಅವರು, “ಯುವವಾಹಿನಿ ಸ್ಫೂರ್ತಿದಾಯಕ ಸಂಸ್ಥೆಯಾಗಿದ್ದು, ಯುವಜನರನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ರೂಪಿಸಲು ಶ್ರಮಿಸುತ್ತಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವು ಸಣ್ಣ ವಯಸ್ಸಿನಲ್ಲಿಯೇ ಮೂಡಿಬರಬೇಕು. ಸಮಾಜ ಸೇವೆ ಮಾಡುವ ತುಡಿತ ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಮೂಡಲು ಸಾಧ್ಯ” ಎಂದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಪಡುಬಿದ್ರಿ ಘಟಕದ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

60 ವಿದ್ಯಾರ್ಥಿಗಳಿಗೆ ₹4 ಲಕ್ಷ ವಿದ್ಯಾನಿಧಿ
ಶೈಕ್ಷಣಿಕವಾಗಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಪಡುಬಿದ್ರಿ ವ್ಯಾಪ್ತಿಯ ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಸುಮಾರು 60 ವಿದ್ಯಾರ್ಥಿಗಳಿಗೆ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿಯ ಮೂಲಕ ಒಟ್ಟು ₹4 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಪಿ.ಕೆ. ಮನೋಜ್ ಪೂಜಾರಿ ಹಾಗೂ ಅವರ ಪತ್ನಿ, ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ಹಾಗೂ ಅವರ ಪತ್ನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪ್ರೊಫೆಸರ್ ಡಾ. ಪಿ.ಕೆ. ಕಿರಣ್ ಕುಮಾರ್, ಉದ್ಯಮಿ ಗಣೇಶ್ ಗುಜರನ್, ನಳಿನಿ ಜಯರಾಮ್, ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಅರುಣ್ ಪಿ.ಕೆ., ಸುಷ್ಮಾ ಅರುಣ್, ಭಾಸ್ಕರ್ ಎನ್. ಅಂಚನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ಅವರು ಅಧ್ಯಕ್ಷತೆ ವಹಿಸಿದ್ದರು. ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ಸುಜಿತ್ ಕುಮಾರ್ ಪ್ರಸ್ತಾವನೆಗೈದರು. ವಿಧಿತ್ ಪೂಜಾರಿ ಕರ್ನಿರೆ ಸ್ವಾಗತಿಸಿದರು. ಶಶಿಕಲಾ ಯಶೋಧರ್ ನೂತನ ಕಾರ್ಯಕಾರಿ ಸಮಿತಿಯನ್ನು ಪರಿಚಯಿಸಿದರು. ಚೈತ್ರ ಗಣೇಶ್, ಚೈತ್ರ ಮನೋಹರ್ ಹಾಗೂ ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಅವಿನಾಶ್ ವಂದಿಸಿದರು.


