ಬಂಟ್ವಾಳ ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಸಮಾನತೆ ಹಾಗೂ ಮಾನವ ಧರ್ಮದ ಪರಿಪಾಲನೆಯ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿಭೇದಗಳನ್ನು ಹೋಗಲಾಡಿಸುವ ಮಹತ್ವದ ಕಾರ್ಯವನ್ನು ಮಾಡಿದರು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹೇಳಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ಗುರುಸ್ಮರಣೆ’ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಅವರು ಮಾತನಾಡಿದರು.
ನಾರಾಯಣಗುರುಗಳ ತತ್ವ, ಆದರ್ಶ ಹಾಗೂ ಮಾನವೀಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರ ಚಿಂತನೆಗಳನ್ನು ಕೇವಲ ಸ್ಮರಿಸುವುದಷ್ಟೇ ಅಲ್ಲದೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಇಂದು ಬಲಿಷ್ಠವಾಗಿ ಬೆಳೆದಿರುವ ಯುವವಾಹಿನಿಯ 35 ಘಟಕಗಳು ನಾರಾಯಣಗುರುಗಳ ಸಂದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಯುವಜನರನ್ನು ಸಂಘಟಿಸಿ, ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಸಂಘಟನೆ ಮಾಡುತ್ತಿರುವುದು ಗುರುತತ್ವದ ನೈಜ ಅನುಷ್ಠಾನವಾಗಿದೆ ಎಂದು ಗಣೇಶ್ ಪೂಂಜರೆಕೋಡಿ ಹೇಳಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು,
ಕಾರ್ಯದರ್ಶಿ ಗೀತಾ ಜಗದೀಶ್, ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ಧನ್ಯವಾದ ನೀಡಿದರು


