ಕೊಣಾಜೆ ಅಗಸ್ಟ್ 28 : ಯುವವಾಹಿನಿ (ರಿ.) ಕೊಲ್ಯ ಹಾಗೂ ಗ್ರಾಮಚಾವಡಿ–ಕೊಣಾಜೆ ಘಟಕದ ವತಿಯಿಂದ ವಿಶ್ವ ಬಿಲ್ಲವರ ಸೇವಾ ಚಾವಡಿಯ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಅಸೈಗೋಳಿಯ ಅಭಯ ಆಶ್ರಯದಲ್ಲಿರುವ ಹಿರಿಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಭಯ ಆಶ್ರಯದ ಹಿರಿಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಬಿಲ್ಲವರ ಸೇವಾ ಚಾವಡಿಯ ಸದಸ್ಯ ಹಾಗೂ ಗ್ರಾಮಚಾವಡಿ ಘಟಕದ ಪ್ರಥಮ ಉಪಾಧ್ಯಕ್ಷ ಅಜಿತ್ ಪಜೀರ್ ಸ್ವಾಗತಿಸಿದರು.
ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಶಶಿಕಾಂತ್ ಪರ್ಯತ್ತೂರು ಅವರು ನಾರಾಯಣ ಗುರುಗಳ ಜನ್ಮ, ಜೀವನ ಹಾಗೂ ಸಮಾಜದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳ ಕುರಿತು ವಿವರಿಸಿ ಗುರುಸಂದೇಶ ನೀಡಿದರು.
ಗ್ರಾಮಚಾವಡಿ ಘಟಕದ ಅಧ್ಯಕ್ಷ ಮುರಳೀಧರ ಕೊಣಾಜೆ ಅವರು ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ನಾರಾಯಣ ಗುರುಗಳ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಚಾವಡಿ ಸದಸ್ಯೆ ಸುಜಾತ ಹರೇಕಳ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಚಾವಡಿ ಘಟಕದ ಹಿರಿಯ ಸಲಹೆಗಾರ ರವೀಂದ್ರ ಬಂಗೇರ, ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷೆ ಸುಧಾ ಸುರೇಶ್, ಕೇಂದ್ರ ಸಮಿತಿ ಯುವಸಿಂಚನ ಸಂಪಾದಕ ಮಂಡಳಿ ಸದಸ್ಯ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಲತೀಶ್ ಸಂಕೋಲಿಗೆ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


