ಕುಪ್ಪೆಪದವು : ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ಹತ್ತು ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಎಂಟನೇ ವರ್ಷದ ಕೃಷ್ಣ ವೇಷ ಸ್ಪರ್ಧೆ ಕುಲವೂರು ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು.ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಭವಾನಂದ ಶೆಟ್ಟಿ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಚಂದ್ರಶೇಖರ್ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಪುಟ್ಟ ಮಕ್ಕಳು ಶ್ರೀಕೃಷ್ಣನ ವೇಷಭೂಷಣ ಧರಿಸಿ ಶ್ರೀಕೃಷ್ಣ ಪರಮಾತ್ಮನ ಲೀಲೆಗಳು ಹಾಗೂ ಸಂದೇಶಗಳನ್ನು ಸಮಾಜಕ್ಕೆ ಪರಿಚಯಿಸುವ ಸುಂದರ ವೇದಿಕೆಯನ್ನು ಯುವವಾಹಿನಿ ಒದಗಿಸುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ಅಧ್ಯಕ್ಷ ಗಂಗಾಧರ್ ಎಡಪದವು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಡಪದವು ಶ್ರೀ ರಾಮ ಭಜನಾ ಮಂದಿರದ ಟ್ರಸ್ಟಿ ಧನಂಜಯ ಮೇಸ್ತ್ರಿ ಹಾಗೂ ಮುತ್ತೂರು ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಆಳ್ವ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿರಂಜನ ಬಜಪೆ, ವಿಶ್ವ ಹಿಂದೂ ಪರಿಷತ್ ಗುರುಪುರ ಪ್ರಖಂಡದ ಉಪಾಧ್ಯಕ್ಷ ವಿಶ್ವನಾಥ ಪಾಕಾಜೆ, ತೀರ್ಪುಗಾರರಾದ ಪ್ರಶಾಂತ್ ಎಡಪದವು, ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ಕಲೆ ಮತ್ತು ಸಂಸ್ಕೃತಿ ನಿರ್ದೇಶಕಿ ಸಂಜಾತ ಹಾಗೂ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಕಂದಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ತುಂಟಕೃಷ್ಣ ಎಂಬ ನಾಲ್ಕು ವಿಭಾಗಗಳಲ್ಲಿ ಒಟ್ಟು ಸುಮಾರು 68 ಮಕ್ಕಳು ಭಾಗವಹಿಸಿದ್ದರು. ಪ್ರತಿ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಗುವಿಗೂ ಆಕರ್ಷಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮಕ್ಕೆ ಘಟಕದ ನಿಕಟಪೂರ್ವ ಕಾರ್ಯದರ್ಶಿ ಅಕ್ಷತಾ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಕ್ಷಿತ್ ಕುಮಾರ್ ವರದಿ ವಾಚಿಸಿದರು. ಘಟಕದ ಸದಸ್ಯೆಯರಾದ ದನ್ಯಶ್ರಿ ಹಾಗೂ ಬಿಂದಿಯ ನಿರೂಪಿಸಿದರು. ಪ್ರಶಾಂತ್ ಆಚಾರ್ಯ ಎಡಪದವು ಹಾಗೂ ವಿನೋದ್ ರಾಜ್ ಬಿಸಿರೋಡ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಘಟಕದ ಕಾರ್ಯದರ್ಶಿ ಸಂತೋಷ್ ಬೊಳಿಯ ಧನ್ಯವಾದ ಸಮರ್ಪಿಸಿದರು.
ಪುಟ್ಟ ಮಕ್ಕಳಲ್ಲಿ ಶ್ರೀಕೃಷ್ಣನ ಕುರಿತು ಭಕ್ತಿ, ಸಂಸ್ಕೃತಿ ಹಾಗೂ ಕಲಾಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕೃಷ್ಣ ವೇಷ ಸ್ಪರ್ಧೆ ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯಿತು.


