ಬಂಟ್ವಾಳ ಅಗಸ್ಟ್ 16: ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪ್ರತಿಷ್ಠಿತ“ಆಟಿ ಡೊಂಜಿ ಕೂಟ” ದ ಸಮಾರೋಪ ಸಮಾರಂಭವು ಜನಪದ ನೃತ್ಯ ವೈಭವ, ಚೆನ್ನಮಣೆ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರಗಳೊಂದಿಗೆ ಸಂಭ್ರಮದಿಂದ ನಡೆಯಿತು. ಸಮಾರೋಪದ ಅಂಗವಾಗಿ ನಡೆದ ಜನಪದ ನೃತ್ಯ ವೈಭವ ಪ್ರೇಕ್ಷಕರ ಗಮನ ಸೆಳೆಯಿತು. ಬಂಟ್ವಾಳ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ತಂಡಗಳು ವೈವಿಧ್ಯಮಯ ಜನಪದ ನೃತ್ಯ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ಬೈದಶ್ರೀ ಬಿಲ್ಲವ ಸಂಘ, ಬಡೆಕೊಟ್ಟು–ಮಣಿನಾಲ್ಕೂರು ತಂಡ ಪ್ರಥಮ ಸ್ಥಾನ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಜ್ಞಾನ ಮಂದಿರ ಸಾಂಸ್ಕೃತಿಕ ತಂಡ, ರಾಯಿ–ಕೊಯಿಲ ಅರಳ ದ್ವಿತೀಯ ಸ್ಥಾನ ಹಾಗೂ ಬಿರ್ವೆರ್ ಸೇವಾ ಟ್ರಸ್ಟ್ (ರಿ.), ನರಿಕೊಂಬು ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಚೆನ್ನಮಣೆ ಪಂತ ಸ್ಪರ್ಧೆಯಲ್ಲಿ ಪ್ರವೀಣ್ ಪೂಜಾರಿ ಅಲಾಯಿ ಪ್ರಥಮ, ಅದ್ವಿತ್ ಪೂಜಾರಿ ವಗ್ಗ ದ್ವಿತೀಯ ಹಾಗೂ ರತ್ನಾಕರ ಮೂಡಗೊಡಿ ತೃತೀಯ ಸ್ಥಾನ ಗಳಿಸಿದರು. ಯುವವಾಹಿನಿ ಸದಸ್ಯರು ಹಾಗೂ ಅವರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಅಕ್ಷರ ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಮಾಜ ಹಾಗೂ ಸಂಘಟನೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ
ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಲ್ಲಾಲ್‌ಬಾಗ್ ಅವರಿಗೆ ಸೇವಾ ಯುವ ರತ್ನ ಪುರಸ್ಕಾರ, ಸುಗುಣ ಇವರಿಗೆ ಶ್ರಮಜೀವನ ರತ್ನ ಪುರಸ್ಕಾರ, ಪ್ರಕಾಶ್ ಪೂಜಾರಿ ಇವರಿಗೆ ಸಮರ ಕಲಾ ರತ್ನ ಪುರಸ್ಕಾರ ಸದಾನಂದ ಪೂಜಾರಿ ಇವರಿಗೆ ಜೀವದಾತ ಪುರಸ್ಕಾರ ಪ್ರದಾನ ಮಾಡಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರಕೋಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉದ್ಯಮಿಗಳಾದ ತಾರಾನಾಥ ಸಾಲ್ಯಾನ್ ಪಿ., ಅಶೋಕ್ ಪೂಜಾರಿ ಪಡೀಲ್, ಕೇಶವ ಬಿ. ಹಾಗೂ ಕಿರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಟಿಯ ಸಾಂಪ್ರದಾಯಿಕ ಬದುಕು, ಸಂಸ್ಕೃತಿ, ಕಲೆ, ಕ್ರೀಡೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ “ಆಟಿ ಡೊಂಜಿ ಕೂಟ”ವು ಬಂಟ್ವಾಳದ ಸಾಂಸ್ಕೃತಿಕ ವಲಯದಲ್ಲಿ ಗಮನ ಸೆಳೆಯಿತು. ಕಾರ್ಯಕ್ರಮವು ಯುವವಾಹಿನಿ ಸದಸ್ಯರ ಒಗ್ಗಟ್ಟು, ಶ್ರಮ ಹಾಗೂ ಸಂಘಟನಾ ಶಕ್ತಿಗೆ ಸಾಕ್ಷಿಯಾಯಿತು.

ಘಟಕದ ಕಾರ್ಯದರ್ಶಿ ಗೀತಾ ಜಗದೀಶ್ ಸ್ವಾಗತಿಸಿದರು. ಸಂಚಾಲಕ ಯಶೋಧರ್ ಧನ್ಯವಾದ ಸಮರ್ಪಿಸಿದರು. ದಿನೇಶ್ ಸುವರ್ಣ ರಾಯಿ, ಶ್ರೀನಿಧಿ ಹಾಗೂ ಲೋಹಿತ್ ಕನಪಾದೆ ಕಾರ್ಯಕ್ರಮ ನಿರೂಪಿಸಿದರು. ಸಂಭ್ರಮದಿಂದ ಆರಂಭಗೊಂಡ “ಆಟಿ ಡೊಂಜಿ ಕೂಟ”ದ ಸಮಾರೋಪವು ಸಾಂಸ್ಕೃತಿಕ ನೆನಪುಗಳನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.







