ಉಡುಪಿ, ಆಗಸ್ಟ್.20: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುರು ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

ಯುವವಾಹಿನಿ (ರಿ.) ಉಡುಪಿ ಘಟಕದ ಮಾಜಿ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರು ಗುರುಸಂದೇಶ ನೀಡುತ್ತಾ, “ಯುವಜನತೆಗೆ ಸದಾ ಪ್ರೇರಣೆಯಾಗುವಂತಹ ಸಮಾಜಮುಖಿ ಕಾರ್ಯಗಳನ್ನು ಯುವವಾಹಿನಿ ಕೈಗೊಳ್ಳುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಮಾಜಿ ಅಧ್ಯಕ್ಷ ಭಾಸ್ಕರ್ ಸುವರ್ಣ ಅವರು ಪೂಜೆ ನೆರವೇರಿಸಿ, ಪ್ರಸಾದ ವಿತರಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.
“ಮನೆಗೊಂದು ಮರ–ಊರಿಗೊಂದು ವನ” ಎಂಬ ಧ್ಯೇಯವಾಕ್ಯದಡಿ ಕಾರ್ಯಕ್ರಮದ ಅಂಗವಾಗಿ ಮನೆಯವರಿಗೆ ಹಾಗೂ ಗುರುಸಂದೇಶ ನೀಡಿದ ಅಶೋಕ್ ಕೋಟ್ಯಾನ್ ಅವರಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು. ಸಮಾಜಸೇವಾ ನಿರ್ದೇಶಕ ಸುಜಿತ್ ಮಟ್ಟು, ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕಿ ಶಾರದಾ ಉಮೇಶ್ ಹಾಗೂ ಮಾಜಿ ಅಧ್ಯಕ್ಷರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಘಟಕದ ಅಧ್ಯಕ್ಷ ವಿನೋದ್ ಮಂಚಿ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ವೀಕ್ಷಿತ್ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸಮೂಹ ಛಾಯಾಚಿತ್ರ ಹಾಗೂ ಉಪಹಾರದೊಂದಿಗೆ ಗುರು ಸತ್ಸಂಗ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.


