ಉಪ್ಪಿನಂಗಡಿ ಜುಲೈ 26: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಮಹತ್ವಾಕಾಂಕ್ಷಿ ಸರಣಿ ಕಾರ್ಯಕ್ರಮ “ಯುವ ಬಾಂಧವ್ಯ–2026”ರ ಜುಲೈ ತಿಂಗಳ ಕಾರ್ಯಕ್ರಮವು ಜುಲೈ 26ರಂದು ಘಟಕದ ಸಂಘಟನಾ ಕಾರ್ಯದರ್ಶಿ ವಿಜಯ ಶಿಲ್ಪಿ ಅವರ ಮನೆಯಲ್ಲಿ ನಡೆಯಿತು. ಗುರುಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಅವರು ಘಟಕದ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಎಸ್. ಸಾಂತ್ಯ ಅವರು ಗತ ಕಾರ್ಯಕ್ರಮಗಳ ವರದಿ ಮಂಡಿಸಿದರೆ, ಕೋಶಾಧಿಕಾರಿ ಸದಾಶಿವ ಬಂಗೇರ ಎಲಿಯ ಅವರು ಲೆಕ್ಕಪತ್ರ ಮಂಡಿಸಿದರು.

ಉಪ್ಪಿನಂಗಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಘಟಕದ ಮಾಜಿ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಅವರು ದೀಪ ಬೆಳಗಿಸುವ ಮೂಲಕ “ಯುವ ಬಾಂಧವ್ಯ–2026” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಘಟನೆಯ ಮೂಲಕ ಎಲ್ಲರೂ ಒಗ್ಗಟ್ಟಾಗಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಯುವಕರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ದೊರೆತಾಗ ಸದೃಢ ಯುವ ಸಮುದಾಯವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಘಟಕದ ಗೌರವ ಸಲಹೆಗಾರ ವರದರಾಜ್ ಎಂ. ಮಾತನಾಡಿ, “ಯುವ ಬಾಂಧವ್ಯ” ಕುಟುಂಬ ಮಿಲನದ ಮೂಲಕ ಸದಸ್ಯರ ನಡುವಿನ ಆತ್ಮೀಯತೆಯನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಗ್ರಾಮಮಟ್ಟದಲ್ಲಿ ಯುವವಾಹಿನಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಯುವಕರನ್ನು ಸಮಾಜದ ಮುನ್ನೆಲೆಗೆ ತರುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಮಾವೇಶ ನಿರ್ದೇಶಕ ಅಜಿತ್ ಕುಮಾರ್ ಪಾಲೇರಿ ಅವರು ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ನಡೆಯಲಿರುವ ವಾರ್ಷಿಕ ಸಮಾವೇಶದ ಕುರಿತು ಮಾಹಿತಿ ನೀಡಿದರು. ಉಪ್ಪಿನಂಗಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಕುಕ್ಕುಜೆ ಅವರು ಘಟಕದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಜುಲೈ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ಯುವವಾಹಿನಿ ಸದಸ್ಯರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಸಂಯುಕ್ತ್ ಕಡ್ತಿಲ ಹಾಗೂ ಕೀರ್ತನ್ ಕುಮಾರ್ ಅವರನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಿ, ಆತಿಥ್ಯ ನೀಡಿದ ವಿಜಯ ಶಿಲ್ಪಿ ಹಾಗೂ ಅವರ ಕುಟುಂಬವನ್ನು ಘಟಕದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಗುಣಕರ ಅಗ್ನಾಡಿ, ಡೀಕಯ್ಯ ಗೌಂಡತ್ತಿಗೆ, ಕೃಷ್ಣಪ್ಪ ಪೂಜಾರಿ, ಸೋಮಸುಂದರ್ ಕೊಡಿಪ್ಪಾನ, ನಾಣ್ಯಪ್ಪ ಕೋಟ್ಯಾನ್, ನಿರ್ದೇಶಕರಾದ ಮಾಧವ ಬಿ.ಕೆ., ಹೇಮಾವತಿ ಕುಕ್ಕುಜೆ, ಅನಿತಾ ಸತೀಶ್, ಸುರೇಶ್ ಶಿಬಾರ್ಲ, ರಾಜೀವ ಪೂಜಾರಿ ಇಪ್ಪನೊಟ್ಟು ಸೇರಿದಂತೆ ಯುವವಾಹಿನಿ ಸದಸ್ಯರು ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ಎಸ್. ಸಾಂತ್ಯ ಅವರು ವಂದಿಸಿದರು.







