ವೇಣೂರು, ಆಗಸ್ಟ್ 19:ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಯುವವಾಹಿನಿಯ ಆಡಳಿತ ಕಚೇರಿಗೆ ದಾರಂದ ಬಾಗಿಲು ಸಮರ್ಪಿಸುವ ಕಾರ್ಯಕ್ರಮವು ನಾರಾವಿಯ ಸನ್ನಿಧಿ ಪ್ಯಾಲೇಸ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು, ಯುವವಾಹಿನಿಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಅಭಿವೃದ್ಧಿಗೆ ಇಂತಹ ಸಮಾಜಮುಖಿ ಕೊಡುಗೆಗಳು ಮಹತ್ವದ್ದಾಗಿವೆ. ಆಡಳಿತ ಕಚೇರಿಗೆ ಕೊಡುಗೆ ನೀಡಿದ ದಾನಿಗಳ ಹೆಸರು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ಯುವಜನರು ಸಮಾಜಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನೆಯ ಆಶಯಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.

ಸನ್ನಿಧಿ ಪ್ಯಾಲೇಸ್ ಇಂಡಸ್ಟ್ರೀಸ್, ನಾರಾವಿಯ ವೀರಮ್ಮ ಸಂಜೀವ ಸಾಲ್ಯಾನ್ ಹಾಗೂ ಮಕ್ಕಳು ಮತ್ತು ಮಂಜಪ್ಪ ಪೂಜಾರಿ ಅವರು ನೀಡಿದ ಪೂರ್ಣ ಪ್ರಮಾಣದ ದಾರಂದ ಬಾಗಿಲುಗಳನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಡೊಂಕಬೆಟ್ಟು ಅವರು, ಸಂಸ್ಥೆಗೆ ಕೊಡುಗೆ ನೀಡುವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಯೋಗವೆಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಯಂತ್ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಕಟ್ಟಡ ಸಮಿತಿ ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ., ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ದಾನಿ ಮಂಜಪ್ಪ ಪೂಜಾರಿ ಕೊಕ್ರಾಡಿ, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಪೊಕ್ಕಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಸುಶಾಂತ್ ಕರ್ಕೆರ ಮೂಡಬಿದಿರೆ ಹಾಗೂ ಶುಭಕರ ಪೂಜಾರಿ ಸಾವ್ಯ ವೇಣೂರು ಉಪಸ್ಥಿತರಿದ್ದರು.
ದಾರಂದ ಬಾಗಿಲು ಸಮರ್ಪಣೆಯ ಮೂಲಕ ಸಮಾಜದ ಮೇಲಿನ ಕಾಳಜಿ ಹಾಗೂ ಸೇವಾ ಮನೋಭಾವವನ್ನು ವ್ಯಕ್ತಪಡಿಸಿದ ದಾನಿಗಳನ್ನು ಗಣ್ಯರು ಅಭಿನಂದಿಸಿದರು. ಇಂತಹ ಸಮಾಜಮುಖಿ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ನಿತಿಶ್ ಎಚ್. ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ದಕ್ಷಾ ಅಂಬಲ ವಂದಿಸಿದರು. ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕರಾದ ರಾಕೇಶ್ ಮೂಡುಕೋಡಿ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.


