ಮುಲ್ಕಿ, ಆಗಸ್ಟ್ 15: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ವೈ. ಅಮೀನ್ ಹೇಳಿದರು.

ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಯೂನಿಯನ್ ಕ್ಲಬ್, ಮುಲ್ಕಿಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರ ತ್ಯಾಗವನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಯುವವಾಹಿನಿ (ರಿ.) ಮುಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಮಾತನಾಡಿ, ನಾವಿಂದು ನೆಮ್ಮದಿಯಿಂದ ಬದುಕಲು ಕಾರಣರಾದ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಘಟಕದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಯೋಧ ಮಾಧವ ಪೂಜಾರಿ ಕಿಲ್ಪಾಡಿ ಮಾತನಾಡಿ, ಸ್ವಾತಂತ್ರ್ಯ ದೊರೆತ ಬಳಿಕವೂ ಗಡಿಯಲ್ಲಿ ಹಗಲು-ರಾತ್ರಿ ಎನ್ನದೆ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ತ್ಯಾಗದಿಂದಾಗಿ ದೇಶದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಸೈನಿಕರ ಸೇವೆಯನ್ನೂ ಸ್ಮರಿಸಬೇಕು ಎಂದರು. ಉಪಾಧ್ಯಕ್ಷ ಲತಿಷ್ ಕಾರ್ನಾಡ್ ಸ್ವಾಗತಿಸಿದರು. ಕಾರ್ಯದರ್ಶಿ ವೇದ ಜಯಕುಬೇರ್ ವಂದಿಸಿದರು. ಮಾಜಿ ಅಧ್ಯಕ್ಷ ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಬೋರ್ಡ್ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಪದಾಧಿಕಾರಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು.


