ಮುಲ್ಕಿ, ಆಗಸ್ಟ್ 12: ತುಳುನಾಡಿನ ಸಂಪ್ರದಾಯ, ಆಚರಣೆಗಳ ಹಿಂದೆ ವೈಜ್ಞಾನಿಕ ಹಾಗೂ ಆರೋಗ್ಯದ ಮಹತ್ವ ಅಡಗಿದೆ. ಆಷಾಢ ಮಾಸದ ಅಮಾವಾಸ್ಯೆಯಂದು ತುಳುವರು ಸೇವಿಸುವ ಔಷಧೀಯ ಗುಣವುಳ್ಳ ಕಷಾಯವು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಯುವವಾಹಿನಿ (ರಿ.) ಮುಲ್ಕಿ ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಹೇಳಿದರು.

ಅವರು ಆಗಸ್ಟ್ 12ರಂದು ಮುಲ್ಕಿ ಬಸ್ ನಿಲ್ದಾಣದ ಬಳಿ ಯುವವಾಹಿನಿ (ರಿ.) ಮುಲ್ಕಿ ಘಟಕದ ಸಂಯೋಜನೆಯಲ್ಲಿ ಲಯನ್ಸ್ ಕ್ಲಬ್ ಮುಲ್ಕಿ, ಲಿಯೋ ಕ್ಲಬ್, ರೋಟರಿ ಕ್ಲಬ್ ಮುಲ್ಕಿ ಹಾಗೂ ನವದುರ್ಗ ಯುವಕ ವೃಂದ ಮುಲ್ಕಿ ಇವರ ಸಹಯೋಗದಲ್ಲಿ ನಡೆದ ಹಾಳೆಯ ಮರದ ತೊಗಟೆಯ ಕಷಾಯ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತುಳುನಾಡಿನ ಪ್ರತಿಯೊಂದು ಆಚರಣೆಯಲ್ಲೂ ಆರೋಗ್ಯ ಮತ್ತು ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನಶೈಲಿಯ ಸಂದೇಶವಿದೆ. ಇಂತಹ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಅವರು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಸಾರ್ವಜನಿಕರಿಗೆ ಉಪಯುಕ್ತವಾದ ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಸಹಕಾರ ನೀಡಿದಂತಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಅಗತ್ಯವಿರುವಷ್ಟು ಕಷಾಯವನ್ನು ಸಿದ್ಧಪಡಿಸಿ ವಿತರಿಸುವುದು ಸುಲಭದ ಕಾರ್ಯವಲ್ಲ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ನವದುರ್ಗ ಯುವಕ ವೃಂದದ ಜಯ ಸಿ. ಪೂಜಾರಿ, ಯುವವಾಹಿನಿ (ರಿ.) ಮುಲ್ಕಿ ಘಟಕದ ಮಾಜಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಸತೀಶ್ ಕಿಲ್ಪಾಡಿ, ಮಾಧವ ಕಿಲ್ಪಾಡಿ, ರಿತೇಶ್ ಅಂಚನ್, ವಿನಯ್ ಕುಮಾರ್ ಮಟ್ಟು, ಉಪಾಧ್ಯಕ್ಷ ಲತೀಷ್ ಕಾರ್ನಾಡ್, ಕೋಶಾಧಿಕಾರಿ ಭವಿಷ್ ಸಾಲ್ಯಾನ್, ಭಾಸ್ಕರ್ ಕೊಕ್ರಾಣಿ, ಸುನೀತ ದಾಮೋದರ್, ಪ್ರಥಮ್ ಬಪ್ಪನಾಡು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಕಷಾಯ ವಿತರಿಸುವ ಮೂಲಕ ತುಳುನಾಡಿನ ಸಾಂಪ್ರದಾಯಿಕ ಆರೋಗ್ಯ ಪದ್ಧತಿಯ ಮಹತ್ವವನ್ನು ಸಾರಲಾಯಿತು.







