ಬಂಟ್ವಾಳ, ಆಗಸ್ಟ್ 15: ಸ್ವಾತಂತ್ರ್ಯವೆಂದರೆ ಕೇವಲ ಪರಕೀಯ ಆಡಳಿತದಿಂದ ಮುಕ್ತಿ ಹೊಂದುವುದಲ್ಲ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು, ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದು, ಪರಿಸರವನ್ನು ಕಾಪಾಡುವುದು, ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭಾರತವನ್ನು ನಿರ್ಮಿಸುವುದೇ ನಿಜವಾದ ದೇಶಭಕ್ತಿ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಜೆ. ಎಸ್. ಹೇಳಿದರು.

ಅವರು ಆಗಸ್ಟ್ 15ರಂದು ಯುವವಾಹಿನಿ (ರಿ.) ಬಂಟ್ವಾಳ ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ನಮ್ಮ ದೇಶದ ಗಡಿಯಲ್ಲಿ ಹಗಲು-ರಾತ್ರಿ ಎನ್ನದೆ, ಪ್ರತಿಕೂಲ ಹವಾಮಾನದಲ್ಲಿಯೂ ದೇಶದ ರಕ್ಷಣೆಗೆ ನಿಂತಿರುವ ಸೈನಿಕರ ಧೈರ್ಯ ಮತ್ತು ತ್ಯಾಗದಿಂದ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಅದೇ ರೀತಿ, ದೇಶದ ಕೋಟ್ಯಂತರ ಜನರಿಗೆ ಅನ್ನ ನೀಡಲು ಬಿಸಿಲು, ಮಳೆ ಎನ್ನದೆ ಭೂಮಿಯನ್ನು ನಂಬಿ ದುಡಿಯುತ್ತಿರುವ ಕೃಷಿಕರು ದೇಶದ ಬೆನ್ನೆಲುಬಾಗಿದ್ದಾರೆ. ಕೃಷಿಕರು ಮತ್ತು ಸೈನಿಕರ ಸೇವೆಗೆ ಸದಾ ಗೌರವ ಸಲ್ಲಿಸಬೇಕು” ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮತ್ತು ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿದ ಅವರು, ಅವರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಜತೆ ಕಾರ್ಯದರ್ಶಿ ಆನಂದ ಶಂಬೂರು, ಆಂತರಿಕ ಲೆಕ್ಕ ಪರಿಶೋಧಕರಾದ ಪ್ರಶಾಂತ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಕಾರ್ಯದರ್ಶಿ ಗೀತಾ ಜಗದೀಶ್, ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ಜತೆ ಕಾರ್ಯದರ್ಶಿ ಧನುಷ್ ಮದ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿರಣ್‌ರಾಜ್ ಪೂಂಜರೆಕೋಡಿ ಸ್ವಾಗತಿಸಿದರು.


