ಕಾಪು, ಆಗಸ್ಟ್ 15: ಯುವವಾಹಿನಿ (ರಿ.) ಕಾಪು ಘಟಕದ ವತಿಯಿಂದ ಕಾಪು ಲೈಟ್ ಹೌಸ್ ಗೆಸ್ಟ್ ಹೌಸ್ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಹಾಗೂ ಜೆಸಿಐ ಕಾಪು ಅಧ್ಯಕ್ಷ JFD ವಿಕ್ಕಿ ಪೂಜಾರಿ ಮಡುಂಬು ಅವರ ನೇತೃತ್ವದಲ್ಲಿ, ಮಾಜಿ ಸೈನಿಕ ಕೇಶವ ಪೂಜಾರಿ ಅವರ ಉಪಸ್ಥಿತಿಯಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.

ಧ್ವಜಾರೋಹಣದ ಬಳಿಕ ಜೆಸಿಐ ಕಾಪು ಅಧ್ಯಕ್ಷ ವಿಕ್ಕಿ ಪೂಜಾರಿ ಅವರು ಧ್ವಜಾರೋಹಣದ ಮಹತ್ವ ಹಾಗೂ ದೇಶಭಕ್ತಿಯ ಕುರಿತು ಮಾತನಾಡಿದರು. ಮಾಜಿ ಸೈನಿಕ ಕೇಶವ ಪೂಜಾರಿ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಹಾಗೂ ಯುವಜನತೆಯ ಜವಾಬ್ದಾರಿಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಪು ಲೈಟ್ ಹೌಸ್ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಸಂದೀಪ್ ಅವರ ಸೇವೆಯನ್ನು ಗುರುತಿಸಿ ದೀಪಕ್ ಕುಮಾರ್ ಎರ್ಮಳ್ ಅವರ ವತಿಯಿಂದ ಸನ್ಮಾನಿಸಲಾಯಿತು. ಯುವವಾಹಿನಿ (ರಿ.) ಕಾಪು ಘಟಕದ ಕಾರ್ಯದರ್ಶಿ ಸುನೀಲ್ ಎಸ್. ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಗಣ್ಯರು, ಸದಸ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರು ಹಾಗೂ ಅತಿಥಿಗಳಿಗೆ ಲೈಟ್ ಹೌಸ್ ಅಪಾರ್ಟ್‌ಮೆಂಟ್ ಮಾಲೀಕ ದೀಪಕ್ ಕುಮಾರ್ ಎರ್ಮಳ್ ಅವರ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಯುವವಾಹಿನಿ (ರಿ.) ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ದೇಶಭಕ್ತಿಯ ಸಂಭ್ರಮದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.


