ಮಾಣಿ, ಆಗಸ್ಟ್ 15: ಆರ್ಥಿಕವಾಗಿ ಹಿಂದುಳಿದ ಹಾಗೂ ಶಾಲಾ ಶುಲ್ಕ ಪಾವತಿಸಲು ಅಸಾಧ್ಯವಾಗಿದ್ದ ಏಳು ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿಸುವ ಮೂಲಕ ಯುವವಾಹಿನಿ (ರಿ.) ಮಾಣಿ ಘಟಕವು ಮಾನವೀಯ ಸೇವೆಗೆ ಮುಂದಾಗಿದೆ.

ಶ್ರೀರಾಮಚಂದ್ರ ಹೈಸ್ಕೂಲ್, ಅಯೋಧ್ಯಾನಗರ, ಪೆರ್ನೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ನೆರವು ನೀಡಲಾಯಿತು. ಯುವವಾಹಿನಿಯ ಪ್ರಮುಖ ಧ್ಯೇಯಗಳಾದ ‘ವಿದ್ಯೆ, ಉದ್ಯೋಗ ಮತ್ತು ಸಂಪರ್ಕ’ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ “ಯಾರೂ ಶಿಕ್ಷಣದಿಂದ ವಂಚಿತರಾಗಬಾರದು” ಎಂಬ ತತ್ತ್ವಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ, ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಉಪಾಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷ ರಾಜೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾದ ಶುಭಾ ಪೆರ್ನೆ, ಅಮಿತಾ ಪೆರ್ನೆ ಹಾಗೂ ಕಾರ್ತಿಕ್, ಬಿಳಿಯೂರು ಪೆರ್ನೆ ಗ್ರಾಮದ ಬಿರುವೆರ್ ಕೂಟದ ಅಧ್ಯಕ್ಷ ಉಮೇಶ್ ಬಾಕಿಮಾರು, ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ, ಪ್ರಾಚಾರ್ಯ ಶೇಖರ್ ರೈ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚೇತನ್ ಮಲ್ಲಡ್ಕ ಮತ್ತು ಶಿಕ್ಷಕಿ ಆಶಾಲತಾ ಉಪಸ್ಥಿತರಿದ್ದರು.
“ವಿದ್ಯೆಯಿಂದ ಬೆಳಕು, ಸೇವೆಯಿಂದ ಬದುಕಿಗೆ ಅರ್ಥ. ಅಗತ್ಯವಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಯುವವಾಹಿನಿ ಮಾಣಿ ಘಟಕದ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ” ಎಂದು ಶಾಲೆಯ ಮುಖ್ಯ ಶಿಕ್ಷಕರು ಅಭಿಪ್ರಾಯಪಟ್ಟರು. ಯುವವಾಹಿನಿ (ರಿ.) ಮಾಣಿ ಘಟಕವು ಶಿಕ್ಷಣ, ಸೇವೆ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ, ಅಗತ್ಯವಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ.


