ಮಾಣಿ, ಆಗಸ್ಟ್ 9: ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಶ್ರೀಮತಿ ಜಾನಕಿ ದರ್ಕಾಸು ಪೆರ್ನೆ ಅವರ ಮನೆಯಲ್ಲಿ ಆಯೋಜಿಸಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪೆರ್ನೆ–ಬಿಳಿಯೂರು ಇದರ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿದೆ. ಹಿಂದಿನ ಕಾಲದ ಆಟಿ ಆಚರಣೆ, ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಆಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಯುವವಾಹಿನಿ ಮಾಣಿ ಘಟಕದ ‘ಆಟಿ ಸಿರಿ ಸಂಭ್ರಮ’ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಕಿ ದರ್ಕಾಸು ಪೆರ್ನೆ, ನವೀನ್ ಕುಮಾರ್ ಪದಬರಿ ಹಾಗೂ ಉಮೇಶ್ ಬಾಕಿಮಾರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಸ್ವಾತಿ ವಂದಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಆಟಿ ಕೂಟದ ಸ್ಪರ್ಧೋತ್ಸವದಲ್ಲಿ ಚೆನ್ನಮನೆ ಆಟ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ನಿಧಿ ಶೋಧ, ಅಡುಗೆ ತಯಾರಿಕೆ, ಮಕ್ಕಳ ವಿವಿಧ ಆಟಗಳು, ಹಿಡಿಸುಡಿ ತಟ್ಟಿ ಹೆಣೆಯುವುದು, ನಿಧಿ ಶೋಧ ರೀಲ್ಸ್ ಸ್ಪರ್ಧೆ ಹಾಗೂ ಮಾಜಿ ಅಧ್ಯಕ್ಷರಿಗೆ ವಿಶೇಷ ಸ್ಪರ್ಧೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಮತ್ತು ಮನರಂಜನಾ ಸ್ಪರ್ಧೆಗಳು ನಡೆದವು.
ಊರಿನ ಹಿರಿಯರು, ಯುವಕರು, ಮಕ್ಕಳು ಹಾಗೂ ಯುವವಾಹಿನಿಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ಆಟಗಳ ಮೂಲಕ ಹಿರಿಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕಿದರೆ, ಮಕ್ಕಳು ಹಾಗೂ ಯುವಕರು ಹಿಂದಿನ ಕಾಲದ ಆಟಗಳ ಪರಿಚಯ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಪೂಜಾರಿ ಅವರು ‘ಆಟಿ ಸೊಗಡು–ಮಾತಿನ ಸೊಗಡು’ ಕಾರ್ಯಕ್ರಮದಲ್ಲಿ ಮಾತನಾಡಿ, ಆಟಿ ತಿಂಗಳು ಹಿಂದಿನ ತಲೆಮಾರಿನ ಬದುಕಿನ ಅವಿಭಾಜ್ಯ ಭಾಗವಾಗಿತ್ತು. ಅಂದಿನ ಸರಳ ಜೀವನಶೈಲಿ, ಸ್ಥಳೀಯ ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಆಟಗಳು ಇಂದಿಗೂ ಸ್ಮರಣೀಯವಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಆ ದಿನಗಳ ನೆನಪುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಉತ್ತಮ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಆತಿಥ್ಯ ನೀಡಿ ಸಹಕರಿಸಿದ ಜಾನಕಿ ದರ್ಕಾಸು ಪೆರ್ನೆ ಅವರನ್ನು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಗೌರವಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು. ಕೇಶವ ಪೂಜಾರಿ ಸುಣ್ಣಾನ, ನಾರಾಯಣ ಸಾಲ್ಯಾನ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪುಮಣಿ ಹಾಗೂ ಘಟಕದ ಸಲಹೆಗಾರ ಲೋಕನಾಥ ತಿಮ್ಮರಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ವಿಕ್ರಂ ಬಿಳಿಯೂರು, ಶುಭಾ ಪೆರ್ನೆ ಹಾಗೂ ಅಮಿತಾ ಪೆರ್ನೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ರಾಜೇಶ್ ಬಲ್ಯ ಹಾಗೂ ಪ್ರಜ್ಞಾ ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಮಹೇಶ್, ಪ್ರಶಾಂತ್ ಎನ್.ಎಸ್., ನೇತ್ರಾವತಿ ಬಳ್ಪ ಹಾಗೂ ತಂಡದವರು ನಿರ್ವಹಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಧನ್ಯವಾದ ಸಲ್ಲಿಸಿದರು.
ತುಳುನಾಡಿನ ಆಟಿ ಸಂಸ್ಕೃತಿಯ ಸೊಗಡು, ಹಿರಿಯರ ಸವಿನೆನಪು, ಯುವಕರ ಉತ್ಸಾಹ ಹಾಗೂ ಮಕ್ಕಳ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮವು ಮಾಣಿ ಯುವವಾಹಿನಿ ಘಟಕದ ಒಗ್ಗಟ್ಟು ಹಾಗೂ ಸಂಘಟನಾ ಶಕ್ತಿಗೆ ಸಾಕ್ಷಿಯಾಯಿತು.


