ಉಡುಪಿ, ಆಗಸ್ಟ್ 09: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ‘ಅಟಿಡೊಂಜಿ ದಿನ’ ಕಾರ್ಯಕ್ರಮವು ಘಟಕದ ಸಭಾಂಗಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷರುಗಳು ಒಗ್ಗೂಡಿ ಗುರುವಿಗೆ ದೀಪ ಬೆಳಗಿಸುವ ಮೂಲಕ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಬಳಿಕ ಚೆನ್ನಮನೆಯ ಆಟವಾಡಿ, ವಾಲೆಬೆಲ್ಲ ಹಂಚುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಯುವವಾಹಿನಿಯ ಸದಸ್ಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ 35ಕ್ಕೂ ಅಧಿಕ ಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ತಂದಿದ್ದರು. ಬಳಿಕ ನಡೆದ ಸಾಂಪ್ರದಾಯಿಕ ಭೋಜನ ಎಲ್ಲರ ಗಮನ ಸೆಳೆಯಿತು.
ಯುವವಾಹಿನಿ ಉಡುಪಿ ಘಟಕ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಮಾತನಾಡಿ, ಯುವವಾಹಿನಿ ಈವರೆಗೆ ನಡೆಸಿಕೊಂಡು ಬಂದಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಘಟಕದ ಮಾಜಿ ಅಧ್ಯಕ್ಷ ಭಾಸ್ಕರ್ ಸುವರ್ಣ ಅವರು ಆಟಿ ತಿಂಗಳ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಮನೋರಂಜನಾ ಭಾಗದಲ್ಲಿ ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್, ಚಿದಾನಂದ ಕೋಟ್ಯಾನ್ ಹಾಗೂ ಯುವವಾಹಿನಿಯ ಸದಸ್ಯರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರನ್ನು ರಂಜಿಸಿದರು. ಸದಸ್ಯರಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳು ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಮಹೇಶ್ ಮಲ್ಪೆ ನಡೆಸಿಕೊಟ್ಟರು.
ಸದಸ್ಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಹಾಡಿ–ಕುಣಿದು ಸಂಭ್ರಮಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಘಟಕದ ಅಧ್ಯಕ್ಷ ವಿನೋದ್ ಮಂಚಿ ಕೃತಜ್ಞತೆ ಸಲ್ಲಿಸಿದರು. ಸುಮಾರು 70ಕ್ಕೂ ಅಧಿಕ ಮಂದಿ ಸಾಂಪ್ರದಾಯಿಕ ಭೋಜನವನ್ನು ಸ್ವೀಕರಿಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ನೂತನವಾಗಿ ಸೇರ್ಪಡೆಗೊಂಡ ಸದಸ್ಯರು ಉಪಸ್ಥಿತರಿದ್ದರು. ಸಾಂಪ್ರದಾಯಿಕ ಭೋಜನ, ಆಟ–ಮನೋರಂಜನೆ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ‘ಅಟಿಡೊಂಜಿ ದಿನ’ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.


