ಮಾಣಿ ಅಗಸ್ಟ್ 09: ಮಾಣಿ ಪರಿಸರದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಆಂಬ್ಯುಲೆನ್ಸ್ ಸೇವೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮದ ವೇದಿಕೆಯಲ್ಲಿ ನೆರವೇರಿತು.
ಜನರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ಈ ‘ಸೇವಾ ಸ್ಪರ್ಶ–ಆಂಬ್ಯುಲೆನ್ಸ್ ಸೇವೆ’ ಮಾಣಿ ಹಾಗೂ ಸುತ್ತಮುತ್ತಲಿನ ಜನರಿಗೆ ಮಹತ್ವದ ಆರೋಗ್ಯ ಸೇವಾ ಸೌಲಭ್ಯವಾಗಲಿದೆ.

ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಮಾನವೀಯ ಕಾಳಜಿಯೊಂದಿಗೆ ಸಮಾಜಮುಖಿ ಹೆಜ್ಜೆ ಇಟ್ಟಿರುವ ಯುವವಾಹಿನಿ (ರಿ.) ಮಾಣಿ ಘಟಕದ ಈ ಕಾರ್ಯವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಬಹುಕಾಲದ ಜನರ ನಿರೀಕ್ಷೆಗೆ ಸ್ಪಂದಿಸಿ ರೂಪುಗೊಂಡಿರುವ ಈ ಮಹತ್ಕಾರ್ಯವನ್ನು ಮುಂದಿನ ದಿನಗಳಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಅರ್ಪಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ, ಸಹಭಾಗಿತ್ವ ಹಾಗೂ ಬೆಂಬಲ ಅತ್ಯಮೂಲ್ಯವಾಗಿದೆ ಎಂದು ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.
“ಆರೋಗ್ಯ ಸೇವೆಗಿದು ಕಾಳಜಿಯ ಸ್ಪರ್ಶ…” ಎಂಬ ಆಶಯದೊಂದಿಗೆ ಆರಂಭವಾಗುತ್ತಿರುವ ಈ ಆಂಬ್ಯುಲೆನ್ಸ್ ಸೇವೆ ಮಾಣಿ ಪರಿಸರದ ಜನರಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ಮಹತ್ವದ ಸೇವಾ ಯೋಜನೆಯಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.



