ಮಂಗಳೂರು, ಆ. 3: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಆಗಸ್ಟ್ 3ರಂದು ಸಂಜೆ ಭಜನಾ ಸೇವೆ ಭಕ್ತಿಭಾವದಿಂದ ನಡೆಯಿತು.

ಈ ವಾರದ ಭಜನಾ ಸೇವೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ.), ಕರ್ನಾಟಕ, ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಭಜನಾ ತಂಡದ ಸದಸ್ಯರು ಹರಿನಾಮ ಸ್ಮರಣೆಯೊಂದಿಗೆ ಭಕ್ತಿರಸಪೂರ್ಣ ಭಜನೆಗಳನ್ನು ಹಾಡಿ, ಶ್ರೀ ಗೋಕರ್ಣನಾಥ ಸ್ವಾಮಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾದಾರವಿಂದಗಳಿಗೆ ಸಮರ್ಪಿಸಿದರು.
ಸಂಜೆ 7 ಗಂಟೆಗೆ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಜನಾ ತಂಡದ ಸದಸ್ಯರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ, ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ಸೇರಿದಂತೆ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.


