ಮೂಡುಬಿದಿರೆ, ಆ. 2: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ‘ಅರಿವು–2026’ ಕಾರ್ಯಕ್ರಮವು ಮೂಡುಬಿದಿರೆಯ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಮೃತ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ದೂರವಿದ್ದು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ನಿರಂತರ ಪರಿಶ್ರಮದ ಮೂಲಕ ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ಕರೆ ನೀಡಿದರು.
‘ಗುರು ಸಂದೇಶ’ ಗೋಷ್ಠಿಯಲ್ಲಿ ಪೂಂಜಾಲಕಟ್ಟೆಯ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಎಸ್. ಸನಿಲ್ ಮಾತನಾಡಿ, ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು. ಶಿಕ್ಷಣದ ಜೊತೆಗೆ ಸಂಸ್ಕೃತ ಸಹಿತ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಮಾಜದಿಂದ ದೊರೆಯುವ ಪ್ರೋತ್ಸಾಹಕ್ಕೆ ಪ್ರತಿಯಾಗಿ ಸಮಾಜಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಎಸ್. ಸನಿಲ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೂತನ ಅಧ್ಯಕ್ಷ ನವೀನ್ ಚಂದ್ರ ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ಸಾವ್ಯ, ಯುವಸ್ಪಂದನ ಸೇವಾ ಯೋಜನೆಯ ಅಧ್ಯಕ್ಷ ನವಾನಂದ, ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕಿ ಯೋಗಿತಾ ನವಾನಂದ ಹಾಗೂ ವಿದ್ಯಾನಿಧಿ ನಿರ್ದೇಶಕ ದಯಾನಂದ ಮಾಸ್ತಿಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಶೈಕ್ಷಣಿಕ ಸಾಧನೆಗೈದ ದಿಶಾ ಪೂಜಾರಿ, ತೃಷಾ ಯು. ಪೂಜಾರಿ, ಕಾವ್ಯಶ್ರೀ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ಪ್ರೇಕ್ಷಾ ಅವರಿಗೆ ‘ಶ್ರೀ ಹರಿ ಪ್ರಶಸ್ತಿ’ ಪ್ರದಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ 49 ವಿದ್ಯಾರ್ಥಿಗಳಿಗೆ ‘ಯುವಸಿರಿ ಪ್ರಶಸ್ತಿ–2026’ ಹಾಗೂ ಗೌರವಧನ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ 18 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಾಲ್ವರು ನೂತನ ಸದಸ್ಯರನ್ನು ಯುವವಾಹಿನಿ ಮೂಡುಬಿದಿರೆ ಘಟಕಕ್ಕೆ ಸೇರ್ಪಡೆಯಾದರು
ಯುವವಾಹಿನಿ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷರಾದ ನವಾನಂದ ಸ್ವಾಗತಿಸಿದರು. ಶಂಕರ ಕೋಟ್ಯಾನ್ ಹಾಗೂ ಪೂರ್ಣಿಮ ಕೋಟ್ಯಾನ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೇಘನಾ ವಂದಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗೌರವಿಸುವುದರೊಂದಿಗೆ ಸಮಾಜಮುಖಿ ಮೌಲ್ಯಗಳು, ಸ್ಪರ್ಧಾತ್ಮಕ ಚಿಂತನೆ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಅರಿವು–2026’ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.


