ಹೆಜಮಾಡಿ, ಆ. 2: ಯುವವಾಹಿನಿ (ರಿ.) ಹೆಜಮಾಡಿ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಹೆಜಮಾಡಿ ಬಿಲ್ಲವರ ಸಂಘ (ರಿ.) ಸಭಾಂಗಣದಲ್ಲಿ ಘಟಕದ ಅಧ್ಯಕ್ಷ ನಿಶಾಂಕ್ ಎಸ್. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹೆಜಮಾಡಿ ಬಿಲ್ಲವರ ಸಂಘ (ರಿ.) ಅಧ್ಯಕ್ಷ ಮೋಹನ್ ದಾಸ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯು ಸಮಾಜಮುಖಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಹೆಜಮಾಡಿ ಘಟಕ ನಡೆಸಿದ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು. ನೂತನ ಕಾರ್ಯಕಾರಿ ಸಮಿತಿಯು ಇದೇ ಸೇವಾ ಮನೋಭಾವದಿಂದ ಸಂಘಟನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.

ಆಯ್ಕೆ ಸಮಿತಿಯ ಸಂಚಾಲಕಿ ದೀಪಾ ದಿನೇಶ್ ಅವರು 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದರು. ಬಳಿಕ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಥಮೇಶ್ ಪಿ. ಬಂಗೇರ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ಸದಸ್ಯರ ಸಹಕಾರದೊಂದಿಗೆ ಸಮಾಜಮುಖಿ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮದ ಫಲವಾಗಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಯ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಸದಸ್ಯರ 50 ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ತುಳು ಚಲನಚಿತ್ರ ‘ಗಜಾನನ ಕ್ರಿಕೆಟರ್ಸ್’ ಚಿತ್ರದ ಬಾಲನಟ ಸ್ಕಂದ ದಯಾನಂದ್ ಹೆಜಮಾಡಿ ಹಾಗೂ ಹೆಜಮಾಡಿ ಶ್ರೀ ನಾರಾಯಣ ಗುರು ಮಂದಿರದ ಭಜನಾ ಕಾರ್ಯಕ್ರಮದ ನಿರ್ವಾಹಕ ಸುಭಾಷ್ ಜಿ. ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹೆಜಮಾಡಿ ಶ್ರೀ ನಾರಾಯಣ ಗುರು ಮಂದಿರಕ್ಕೆ ಭಜನಾ ಸೇವೆಗಾಗಿ ಹಾರ್ಮೋನಿಯಂ ಅನ್ನು ಘಟಕದ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರನ್ನು ಹೂ ನೀಡಿ ಗೌರವಿಸಲಾಯಿತು.
ನಿರ್ಗಮಿತ ಅಧ್ಯಕ್ಷ ನಿಶಾಂಕ್ ಎಸ್. ಕೋಟ್ಯಾನ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಹಾಗೂ ಸಂಘಟನಾ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್, ಮುಲ್ಕಿ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ದಯಾನಂದ್ ಹೆಜಮಾಡಿ,ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ಹಾಗೂ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ರಕ್ಷಾ ಪೂಜಾರಿ ಪ್ರಾರ್ಥಿಸಿದರು. ನಿಶಾಂಕ್ ಎಸ್. ಕೋಟ್ಯಾನ್ ಸ್ವಾಗತಿಸಿದರು. ಶಿವರಾಮ್ ಜಿ. ಅಮೀನ್ ಪ್ರಸ್ತಾವನೆಗೈದರು. ಪ್ರಾಪ್ತಿ ಆರ್. ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಶಿವರಾಮ್ ಜಿ. ಅಮೀನ್, ಧೀರಜ್ ಹಾಗೂ ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ಸಿ. ಪೂಜಾರಿ ವಂದಿಸಿದರು.


