ಮುಲ್ಕಿ, ಆ. 2: ಕಾರ್ಗಿಲ್ ವಿಜಯ ದಿನಾಚರಣೆಯು ಕೇವಲ ವಿಜಯದ ಸಂಭ್ರಮವಲ್ಲ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮ ಯೋಧರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಗೌರವ ಸಲಹೆಗಾರ ವೈ.ಎನ್. ಸಾಲ್ಯಾನ್ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಂಘದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕಾರ್ಗಿಲ್ ವಿಜಯ ಸುಲಭವಾಗಿ ದೊರೆತ ಗೆಲುವಲ್ಲ. ನಮ್ಮ ಯೋಧರು ತಮ್ಮ ಕುಟುಂಬಕ್ಕಿಂತ ದೇಶದ ಹಿತವನ್ನೇ ಶ್ರೇಷ್ಠವೆಂದು ಭಾವಿಸಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಶೌರ್ಯದಿಂದ ಹೋರಾಡಿದ್ದಾರೆ. ಅನೇಕ ಯೋಧರು ತಮ್ಮ ಅಮೂಲ್ಯ ಜೀವವನ್ನೇ ದೇಶಕ್ಕಾಗಿ ಅರ್ಪಿಸಿದ್ದು, ಅವರ ತ್ಯಾಗ ಮತ್ತು ದೇಶಭಕ್ತಿಯನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಶಶಿಧರ್ ಶೆಟ್ಟಿ ಮಾಯ್ಲೊಟ್ಟು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಧರ್ ಶೆಟ್ಟಿ, ಕಾರ್ಗಿಲ್ ಯುದ್ಧವು ನೆರೆಯ ರಾಷ್ಟ್ರದ ಕುತಂತ್ರದಿಂದ ಆರಂಭವಾದ ಯುದ್ಧವಾಗಿದ್ದು, ತೀವ್ರ ಹಿಮಶೀತ ಮತ್ತು ಎತ್ತರದ ಪ್ರದೇಶದಲ್ಲಿಯೂ ಭಾರತೀಯ ಯೋಧರು ಅಪ್ರತಿಮ ಧೈರ್ಯ ಹಾಗೂ ದೇಶಪ್ರೇಮದಿಂದ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 19 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲೂ ಭಾಗವಹಿಸಿದ್ದ ಯುವವಾಹಿನಿ ಮುಲ್ಕಿ ಘಟಕದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಯೋಧ ಮಾಧವ ಪೂಜಾರಿ ಕಿಲ್ಪಾಡಿ ಅವರನ್ನು ಸಹ ಗೌರವಿಸಲಾಯಿತು. ಯುವವಾಹಿನಿ (ರಿ.) ಮುಲ್ಕಿ ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕುಬೇವೂರು ಹಾಗೂ ಯುವವಾಹಿನಿ ಘಟಕದ ಕಾರ್ಯದರ್ಶಿ ವೇದಾ ಜಯ ಕುಬೇರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಸ್ವಾಗತಿಸಿದರು. ಸಿಂಚನ ಹಾಗೂ ಯಶಸ್ವಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಮಾಜಿ ಅಧ್ಯಕ್ಷ ರಿತೇಶ್ ಅಂಚನ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ವೇದಾ ಜಯ ಕುಬೇರ್ ವಂದಿಸಿದರು. ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.


