ಬೆಳ್ಳಾರೆ, ಆ. 2: ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಆಟಿ ತಿಂಗಳ ಮಹತ್ವವನ್ನು ಇಂದಿನ ಯುವಜನತೆಗೆ ಪರಿಚಯಿಸುವ ಕಾರ್ಯ ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹೇಳಿದರು. ಅವರು ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಭಾನುವಾರ ಬೆಳ್ಳಾರೆ ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಆಯೋಜಿಸಲಾದ ಆಟಿದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಟಿ ತಿಂಗಳು ಕೇವಲ ಆಚರಣೆಯ ತಿಂಗಳಲ್ಲ; ಅದು ನಮ್ಮ ಪೂರ್ವಜರ ಜೀವನ ಪದ್ಧತಿ, ಪ್ರಕೃತಿಯೊಂದಿಗಿನ ಬಾಂಧವ್ಯ ಹಾಗೂ ಸಂಕಷ್ಟದ ದಿನಗಳನ್ನು ಸಹ ಧೈರ್ಯದಿಂದ ಎದುರಿಸಿದ ಬದುಕಿನ ಸಂಕೇತವಾಗಿದೆ. ಇಂತಹ ಪರಂಪರೆಯನ್ನು ಯುವಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಯುವವಾಹಿನಿ ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಹತ್ವದ ಕುರಿತು ಪ್ರಧಾನ ಉಪನ್ಯಾಸ ನೀಡಿದ ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸರಿತಾ ಜನಾರ್ಧನ್, ತುಳುನಾಡಿನ ಆಚಾರ-ವಿಚಾರ, ಜನಪದ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ ಹಾಗೂ ಬಿಲ್ಲವ ಸಂಘ (ರಿ.) ಸುಳ್ಯದ ಅಧ್ಯಕ್ಷ ಕೃಷ್ಣ ಕುಮಾರ್ ಅಲೆಕ್ಕಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಯುವವಾಹಿನಿ ಸುಳ್ಯ ಘಟಕದ ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರದೀಪ್ ನೆಟ್ಟಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ರಂಜಿತ್ ದರ್ಖಾಸ್ತು ವಂದಿಸಿದರು. ಹರ್ಷಿತಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ರೇಖಾ ಗೋಪಾಲ್ ಹಾಗೂ ಸರಿತಾ ಜನಾರ್ಧನ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ ಆಟಿ ತಿಂಗಳ ಸಾಂಪ್ರದಾಯಿಕ ಖಾದ್ಯಗಳನ್ನೊಳಗೊಂಡ ವಿಶೇಷ ಭೋಜನವನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು


