
ಊರ್ಮಿಳೆಯ ವ್ಯಥೆ
ಅರಮನೆಯ ವೈಭೋಗ ಸಾಕೆನಿಸಿತು ಊರ್ಮಿಳೆಗೆ |
ಪತಿಯ ಸಾಂಗತ್ಯ ಬೇಕೆನಿಸಿತು ಬಾಳ್ವೆಗೆ ||
ಕೋಸಲದ ಕನ್ಯಾಮಣಿ ಬೆದರಿ ನಿಂತಳು |ಅಲಗಿನರಮನೆಯಲ್ಲಿ ಬೆಂದoತಾದಳು.||
ಲಕ್ಷ್ಮಣನ ಸಹಚಾರಿಣಿಯೆoಬ ಹೆಸರಿಲ್ಲ |
ಸಂಬಂಧಗಳ ಹೊರತಾಗಿ ಅಸ್ಮಿತೆಯ ವರವಿಲ್ಲ ||
ಜಗದ ಕಣ್ಣಿಗೆ ದುರಂತ ನಾಯಕಿ ಇವಳು |
ಮೌನದಲ್ಲೇ ಸಹಿಸಿ ಕನಸುಗಳ ಬಲಿಕೊಟ್ಟವಳು ||
ಇವಳು ಬಯಸದೆ ಬಂದದ್ದು ಚಿರನಿದ್ರೆಯೋಗ |
ಚಿರತಪಸ್ವಿಯಾಗಿ ಕಳೆದಳು ಜೀವನದ ಬಹುಭಾಗ ||
ಒಡೆಯನ ಕರ್ತವ್ಯಪಾಲನೆಗೆ ಅಡ್ಡಿಬರುತ್ತಿರಲಿಲ್ಲ |
ಆಲಸ್ಯತನದ ನಿದ್ದೆಗೆ ಮನವೊಪ್ಪುತ್ತಿರಲಿಲ್ಲ ||
ಪಾತ್ರದ ಹಿಂದಿದೆ ಮೌನ ಸಂಭಾಷಣೆಯ ದೃಶ್ಯಾವಳಿಗಳು |
ಸಂಸಾರ ಬೆಳಗುವ ತ್ಯಾಗಮಯಿ ಸ್ತ್ರೀಯ ಕಥನಗಳು||
ಪತಿಯ ಆಗಮನಕೆ ಪತಿವ್ರತೆ ಪ್ರತಿಕ್ಷಣ ಕಾದಳು |
ನಂಬಿಕೆಯ ಬೆಳಕಿನಡಿ ದುಃಖಗಳ ಮರೆತಳು||.




