ಮುಲ್ಕಿ, ಜುಲೈ 26: “ಇಂದು ದೇಶ-ವಿದೇಶಗಳಲ್ಲಿ ಆಟಿಡೊಂಜಿ ದಿನದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದರೆ, ಅದಕ್ಕೆ ಮೂಲ ಪ್ರೇರಣೆಯೇ ಯುವವಾಹಿನಿ (ರಿ.) ಮುಲ್ಕಿ ಘಟಕ” ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ್ ಹೆಜ್ಮಾಡಿ ಹೇಳಿದರು.
ಅವರು ಜುಲೈ 26ರಂದು ಮುಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಆಯೋಜಿಸಲಾದ 24ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಿಂದಿನ ಕಾಲದ ಚಿಮಿನಿ ದೀಪ ಬೆಳಗಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಯುವವಾಹಿನಿಯ ಪಾತ್ರ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಆಟಿದ ಮದೀಪು ನೀಡಿದ ಉಗ್ಗಿಲ್ ಬೆಟ್ಟು ಶ್ರೀ ಬ್ರಹ್ಮ ಬೈದೇರು ಮತ್ತು ಚಿಕ್ಕಮ್ಮ ದೇವಿ ಗರೋಡಿ ಅಧ್ಯಕ್ಷ ದಯಾನಂದ ಕರ್ಕೇರ ಮಾತನಾಡಿ, ಮರೆಯಾಗುತ್ತಿರುವ ತುಳುನಾಡಿನ ಸಂಪ್ರದಾಯಗಳನ್ನು ಇಂತಹ ವೇದಿಕೆಗಳ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದೆ. ಈ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ಯುವ ಸಮುದಾಯವನ್ನು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿದರು. ಕಾರ್ಯಕ್ರಮ ನಿರ್ದೇಶಕಿ ಚಿತ್ರಾ ಸುರೇಶ್ ಜತ್ತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ ಜಯ ಕುಬೇರ್ ಯಕ್ಷಗಾನ ಭಾಗವತಿಕೆ ಶೈಲಿಯಲ್ಲಿ ಪ್ರಸ್ತಾವನೆ ಮಂಡಿಸಿದರು. ನರೇಂದ್ರ ಕೆರೆಕಾಡು ಹಾಗೂ ಮೋಹನ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ವೇದ ಜಯಕುಬೇರ್ ವಂದನಾರ್ಪಣೆ ಸಲ್ಲಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಘಟಕದ ಸದಸ್ಯರಿಂದ ಆಟಿದ ನಲಿಕೆ ಪದರಂಗಿತ ಪ್ರದರ್ಶನ ನಡೆಯಿತು. ಅಲ್ಲದೆ, ಚಲನಚಿತ್ರ ನಟರಾದ ಪ್ರಜ್ವಲ್ ಭಂಡಾರಿ, ಶಶಿರಾಜ್ ಆಚಾರ್ಯ, ಪಡು ಕುತ್ಯಾರ್ ಹಾಗೂ ವಿನಾಯಕ ಅವರಿಂದ ‘ಆಟಿದ ತಿಳಿಕೆ’ ಹಾಸ್ಯ ಪ್ರಹಸನ ಪ್ರೇಕ್ಷಕರನ್ನು ರಂಜಿಸಿತು. ಬಳಿಕ ನಡೆದ ಆಟಿದ ಅಟಿಲ್ದ ಕಮ್ಮನದಲ್ಲಿ 1,500ಕ್ಕೂ ಅಧಿಕ ಮಂದಿ ಸಾಂಪ್ರದಾಯಿಕ ಆಟಿ ತಿಂಡಿಗಳ ಸವಿಯನ್ನು ಸವಿದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


