ಮಂಗಳೂರು, ಜುಲೈ 27: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುತ್ತಿರುವ “ಒಂದೇ ನಾಮ, ಒಂದೇ ಭಾವ” ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಜುಲೈ 27ರಂದು ಸಂಜೆ ಭಜನಾ ಸೇವೆಯು ಭಕ್ತಿಭಾವದಿಂದ ನೆರವೇರಿತು.

ಈ ಸಂದರ್ಭದಲ್ಲಿ ಮಂಜುಳ ಪ್ರಭಾಕರ್ ಮತ್ತು ಬಳಗ, ಅಶೋಕನಗರ, ಮಂಗಳೂರು ಅವರ ಸಹಯೋಗದಲ್ಲಿ ಭಜನಾ ಸಂಕೀರ್ತನ ನಡೆಯಿತು. ಭಜನಾ ತಂಡದ ಸದಸ್ಯರು ಹರಿನಾಮ ಸ್ಮರಣೆಯೊಂದಿಗೆ ಭಕ್ತಿರಸಪೂರ್ಣ ಭಜನೆಗಳನ್ನು ಗಾಯನ ಮಾಡಿ, ಶ್ರೀ ಗೋಕರ್ಣನಾಥ ಸ್ವಾಮಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಚರಣಾರವಿಂದಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು.
ಭಜನೆಯ ಸಂದರ್ಭದಲ್ಲಿ “ಸರ್ವೇಜನಾಃ ಸುಖಿನೋಭವಂತು, ಸರ್ವೇ ಸಂತು ನಿರಾಮಯಾಃ” ಎಂಬ ವಿಶ್ವಶಾಂತಿ ಹಾಗೂ ಸರ್ವರ ಕಲ್ಯಾಣದ ಪ್ರಾರ್ಥನೆ ಮೊಳಗಿತು. ಸಂಜೆ 7.00 ಗಂಟೆಗೆ ಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಜನಾ ತಂಡದ ಸದಸ್ಯರನ್ನು ಗೌರವಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


