ಬೆಳ್ತಂಗಡಿ, ಜು. 22 : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯು ಮಹಾಮಂಡಲೇಶ್ವರ 1008 ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ, ಕನ್ಯಾಡಿಯಲ್ಲಿ ನಡೆದ ಈ ಭೇಟಿಯು ಯುವವಾಹಿನಿಯ ನೂತನ ಸಾಲಿನ ಸಂಘಟನಾ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಶುಭಾರಂಭದ ಸಂಕೇತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು, ಯುವವಾಹಿನಿಯು ಶಿಕ್ಷಣ, ಉದ್ಯೋಗ ಮತ್ತು ಸಮಾಜ ಸೇವೆಯ ಮೂಲಕ ಯುವಜನರಲ್ಲಿ ನಾಯಕತ್ವ ಹಾಗೂ ಸೇವಾ ಮನೋಭಾವವನ್ನು ಬೆಳೆಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿಗಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶೀರ್ವದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷೆ ಲೀಲಾವತಿ ಪಣಕಜೆ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿ ಸುದೀಪ್ ಸಾಲಿಯಾನ್ ಸೇರಿದಂತೆ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.


