ಬಂಟ್ವಾಳ, ಜು. 25 : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಐ.ಎಂ.ಎ. ಮಂಗಳೂರು ಶಾಖೆಯ ಸಹಕಾರದೊಂದಿಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶನಿವಾರ ಯಶಸ್ವಿಯಾಗಿ ನಡೆಯಿತು.

ಆರೋಗ್ಯ ಜಾಗೃತಿ ಹಾಗೂ ಸಮಾಜಸೇವೆಯ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಯುವವಾಹಿನಿಯ ಸುಮಾರು 70 ಮಂದಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ವಿವಿಧ ವಿಭಾಗಗಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ 210 ಮಂದಿಗೆ ರಕ್ತ ಪರೀಕ್ಷೆ, 120 ಮಂದಿಗೆ ರಕ್ತದೊತ್ತಡ (ಬಿ.ಪಿ.) ಪರೀಕ್ಷೆ, 150 ಮಂದಿಗೆ ಸಕ್ಕರೆ ಪರೀಕ್ಷೆ, 76 ಮಂದಿಗೆ ಕಣ್ಣಿನ ತಪಾಸಣೆ, 45 ಮಂದಿಗೆ ಸಾಮಾನ್ಯ ವೈದ್ಯಕೀಯ ತಪಾಸಣೆ, 20 ಮಂದಿಗೆ ಚರ್ಮರೋಗ ತಪಾಸಣೆ, 30 ಮಂದಿಗೆ ಮೂತ್ರ ಪರೀಕ್ಷೆ ಹಾಗೂ 30 ಮಂದಿಗೆ ಇಸಿಜಿ (ECG) ಪರೀಕ್ಷೆ ನಡೆಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 59 ಮಂದಿ ರಕ್ತದಾನ ಮಾಡಿದ್ದು, ಅವರಲ್ಲಿ 39 ಮಂದಿ ಯುವವಾಹಿನಿ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಸಮಾಜಮುಖಿ ಕಾರ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ವಿಶೇಷವಾಗಿ, ಪ್ರಥಮ ಬಾರಿಗೆ ಮಹಿಳಾ ಸದಸ್ಯೆಯರು ರಕ್ತದಾನದಲ್ಲಿ ಭಾಗವಹಿಸಿದ್ದು ಶಿಬಿರದ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ (ರಿ.) ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜೆರೆಕೋಡಿ, ಕಾರ್ಯದರ್ಶಿ ಗೀತಾ ಜಗದೀಶ್, ಆರೋಗ್ಯ ನಿರ್ದೇಶಕ ಶೇಖರ ಪೂಜಾರಿ ಅಗಲ್ದೋಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶಿಬಿರದ ಯಶಸ್ಸಿಗೆ ಐ.ಎಂ.ಎ. ಮಂಗಳೂರು ಶಾಖೆಯ ವೈದ್ಯರು, ಆರೋಗ್ಯ ಸಿಬ್ಬಂದಿ, ಯುವವಾಹಿನಿಯ ಮಾಜಿ ಅಧ್ಯಕ್ಷರು, ಆರೋಗ್ಯ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಯಂಸೇವಕರು ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸಾರ್ವಜನಿಕರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.


