ಮಂಗಳೂರು, ಜುಲೈ 20 : “ನಮಗೆ ಕನಸುಗಳಿರಬೇಕು. ಹಾಗೆಯೇ ದೂರದೃಷ್ಟಿಯೂ ಇರಬೇಕು. ನೀವು ಯಾವ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಬೇಕೆಂದು ಬಯಸುತ್ತೀರೋ, ಆ ಕ್ಷೇತ್ರವನ್ನು ‘ನಾನು ಸಾಧಿಸಬಲ್ಲೆ’ ಎಂಬ ಆತ್ಮವಿಶ್ವಾಸದಿಂದ ಆಯ್ಕೆ ಮಾಡಿಕೊಂಡು, ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹಿಂಜರಿಕೆಯಿಂದ ಸಮಯವನ್ನು ವ್ಯರ್ಥ ಮಾಡಿದರೆ, ಕಳೆದ ಸಮಯ ಮತ್ತೆ ಮರಳಿ ಸಿಗುವುದಿಲ್ಲ” ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸೀಡಾಕ್), ಧಾರವಾಡ, ಸೀಡಾಕ್ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು, ಜಿಲ್ಲಾ ಕೌಶಲ್ಯ ಮಿಷನ್, ಮಂಗಳೂರು, ಭಾರತಿ ಟ್ರೈನಿಂಗ್ ಸೆಂಟರ್, ಕೊಟ್ಟಾರ ಚೌಕಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 20ರಿಂದ 30ರವರೆಗೆ ನಡೆಯುವ ಹತ್ತು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಭಾರತಿ ಟ್ರೈನಿಂಗ್ ಸೆಂಟರ್, ಕೊಟ್ಟಾರ ಚೌಕಿ, ಮಂಗಳೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಅವರು, ಮಹಿಳೆಯರು ಸಬಲೀಕರಣಗೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ನಿರುದ್ಯೋಗ ನಿವಾರಣೆಗೆ ಉದ್ಯಮಶೀಲತೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಉದ್ಯಮ ಯಶಸ್ವಿಯಾಗಲು ನಿರಂತರ ಪ್ರಯತ್ನ, ಶ್ರಮ ಹಾಗೂ ಬದ್ಧತೆ ಅಗತ್ಯ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಮಹಿಳೆಯರು ಯಶಸ್ವಿ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳ ಸಂಘ (ಕರ್ನಾಟಕ), ಮಂಗಳೂರು ಅಧ್ಯಕ್ಷ ಸುರೇಶ್ ಪಿ. ಮಾತನಾಡಿ, ಇಂತಹ ತರಬೇತಿ ಕಾರ್ಯಕ್ರಮಗಳು ಯಶಸ್ಸಿನತ್ತ ಸಾಗಲು ಪ್ರೇರಣೆ ನೀಡುತ್ತವೆ. ತರಬೇತಿಯಿಂದ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ತಂದರೆ ಯಾವುದೇ ಉದ್ಯಮದಲ್ಲೂ ಯಶಸ್ಸು ಸಾಧಿಸಬಹುದು. ಛಲ ಮತ್ತು ಹಠವಿದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು. ಸೀಡಾಕ್ ಮಂಗಳೂರು ಉಪನಿರ್ದೇಶಕ ಹಾಗೂ ಸಂಪನ್ಮೂಲ ವ್ಯಕ್ತಿ ಶಿವಾನಂದ ಎಲಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹತ್ತು ದಿನಗಳ ತರಬೇತಿಯಲ್ಲಿ ವಿವಿಧ ಉದ್ಯಮಶೀಲತಾ ಕೌಶಲ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯಮಿಗಳಾಗಿ ಬೆಳೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಸೀಡಾಕ್ ಮಂಗಳೂರು ಉಪನಿರ್ದೇಶಕ ಶಿವಾನಂದ ಎಲಿಗಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪಿ., ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ಸೋನಿಯಾ ರಾಜ್, ಯಶಸ್ವಿ ಉದ್ಯಮಿ ಹರಿಣಾ ಜೆ. ರಾವ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹಾಗೂ ಮಂಗಳೂರು ಮಹಿಳಾ ಘಟಕದ ಪ್ರಥಮ ಉಪಾಧ್ಯಕ್ಷೆ ದೀಪಿಕಾ ಮನೋಜ್ ಉಪಸ್ಥಿತರಿದ್ದರು. ಪ್ರವಿಶ್ಯಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಎಲಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ವಂದನಾರ್ಪಣೆ ಸಲ್ಲಿಸಿದರು.


