ಸುರತ್ಕಲ್, ಜುಲೈ 19 : ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ “ಆಟಿದ ಐಸಿರ -2026” ಕಾರ್ಯಕ್ರಮವು 19-07-2026ರಂದು ಗುಡ್ಡೆಕೊಪ್ಲದ “ಮಾತೃಕೃಪಾ”ದಲ್ಲಿ ಘಟಕದ ಅಧ್ಯಕ್ಷೆ ರೇವತಿ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮನೆಯಂಗಳಕ್ಕೆ ಆಗಮಿಸಿದ ಆಟಿಕಳೆಂಜನಿಗೆ ಪುಷ್ಪ ಅವರು ಪಡಿಯಕ್ಕಿ ಸುರಿಯುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಕ್ಷಕಿ, ನಿರೂಪಕಿ ಹಾಗೂ ಜೈ ತುಳುನಾಡು (ರಿ.) ಬಂಟ್ವಾಳ ಘಟಕದ ಸಂಘಟನಾ ಕಾರ್ಯದರ್ಶಿ ರೇಣುಕಾ ಕಾಣಿಯೂರ್ ಅವರು ಮಾತನಾಡಿ, “ಆಟಿದ ಐಸಿರ ಮರೆಯದಿರಲಿ, ವರ್ಷ ಪೂರ್ತಿ ಕಾಯಿಲೆ ಇರದಿರಲಿ” ಎಂಬ ನುಡಿಯನ್ನು ಉಲ್ಲೇಖಿಸಿದರು. ಆಷಾಢ ಮಾಸದಲ್ಲಿ ಪ್ರಕೃತಿದತ್ತ ಆಹಾರವೇ ಔಷಧಿಯಾಗಿ ಆರೋಗ್ಯ ಕಾಪಾಡುತ್ತದೆ. ಆಟಿ ಅಮಾವಾಸ್ಯೆಯಂದು ಸೇವಿಸುವ ಪಾಲೆ ಮರದ ಕಷಾಯವು ಸಾವಿರಾರು ರೋಗಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಸಭೆಗೆ ಮುನ್ನ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ, ಹಿಂದಿನ ಕಾಲದ ಸಂಪ್ರದಾಯಿಕ ಆಟಗಳನ್ನು ಕುಟುಂಬ ಸದಸ್ಯರು ಉತ್ಸಾಹದಿಂದ ಆಡಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಆಟಿಯ ವಿಶೇಷ ಖಾದ್ಯಗಳಾದ ಬೆಲ್ಲ-ನೀರು, ಪಾನಕ, ಹಲಸಿನ ಹಪ್ಪಳ, ಪತ್ರಡೆ, ಮೆಂತೆ ಗಂಜಿ, ಕುಕ್ಕು-ರೆಚ್ಚೆ ಚಟ್ನಿ, ತಿಮರೆ ಚಟ್ನಿ, ಸಿಗಡಿ ಚಟ್ನಿ, ಕನಿಲೆ ಪದೆಂಗಿ ಗಸಿ, ತೊಜಂಕ್ ಬೋಲೆ ಸುಕ್ಕ, ಉಪ್ಪಡ್ ಪಚ್ಚಿರ್, ಮರುವಾಯಿ ಪುಂಡಿ, ಕಂಚಲ ಫ್ರೈ, ಹಲಸಿನ ಹಣ್ಣಿನ ಗಟ್ಟಿ, ಅನ್ನ, ಹುರುಳಿ ಸಾರು, ಕೋಳಿ ಸಾರು ಹಾಗೂ ಸಾರ್ನಡ್ದೆ ಪಾಯಸ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಿ ಭಕ್ಷ್ಯಗಳನ್ನು ಎಲ್ಲರೂ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷರಾದ ರಿತೇಶ್ ಹಾಗೂ ಭಾಸ್ಕರ್ ಸಾಲ್ಯಾನ್ ನಡೆಸಿಕೊಟ್ಟರು. ಮಾಜಿ ಅಧ್ಯಕ್ಷ ಯೋಗೀಶ್ ಸನಿಲ್ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲನೆಯನ್ನು ಸದಸ್ಯ ಸುಶಾಂತ್ ನಿರ್ವಹಿಸಿದರು.


