ಕೊಲ್ಯ, ಜುಲೈ 9: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ, ಕುಂಪಲದಲ್ಲಿ ಗುರುವಾರ ಸಂಜೆ ನಡೆದ “ಗುರು ಆರಾಧನೆ – ಗುರು ಸಂದೇಶ” ಕಾರ್ಯಕ್ರಮವು ಭಕ್ತಿಭಾವದಿಂದ ಹಾಗೂ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಭವಾನಿ ಶಂಕರ್ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಬಳಿಕ ಯುವವಾಹಿನಿ ಘಟಕದ ಸದಸ್ಯರು ಹಾಗೂ ಕ್ಷೇತ್ರದ ಭಕ್ತರಿಂದ ಸುಮಧುರ ಗುರು ಭಜನಾ ಸಂಕೀರ್ತನೆ ನಡೆಯಿತು.

ಭಜನೆಯ ನಂತರ ಕ್ಷೇತ್ರದ ಪ್ರಧಾನ ದೇವರಿಗೆ ಮಹಾಪೂಜೆ ನೆರವೇರಿಸಿ, ಶ್ರೀ ನಾರಾಯಣ ಗುರುಗಳ ಪಾದಪೂಜೆ ಹಾಗೂ ಮಹಾಪೂಜೆ ನಡೆಸಲಾಯಿತು. ಬಳಿಕ ಭಕ್ತರಿಗೆ ಕಾಫಿ ತೀರ್ಥ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗುರು ಸಂದೇಶ ನೀಡಿದ ಘಟಕದ ಮಾಜಿ ಅಧ್ಯಕ್ಷ ಮೋಹನ್ ಮಾಡೂರು, ಶ್ರೀ ನಾರಾಯಣ ಗುರುಗಳ ತತ್ವ-ಆದರ್ಶಗಳು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವೈಶಿಷ್ಟ್ಯ ಹಾಗೂ ಗುರು ಪೂಜೆಯಲ್ಲಿ ನೀಡುವ ಕಾಫಿ ತೀರ್ಥ ಪ್ರಸಾದದ ಮಹತ್ವ ಮತ್ತು ಅದರ ವಿಶೇಷತೆಯನ್ನು ಸವಿಸ್ತಾರವಾಗಿ ವಿವರಿಸಿದರು. ಗುರುಗಳ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಬದುಕು ನಡೆಸಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಯುವವಾಹಿನಿ (ರಿ.) ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಅಶ್ವಿತಾ ಹರೀಶ್ ಕುಂಪಲ ಅವರ ವತಿಯಿಂದ ಸದಸ್ಯರು ಹಾಗೂ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಮಾತೃಸಂಸ್ಥೆ ಬಿಲ್ಲವ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಭಜನಾ ಸೇವೆಯಲ್ಲಿ ತೊಡಗಿಸಿಕೊಂಡರು. ಭಕ್ತಿಭಾವ, ಸೌಹಾರ್ದತೆ ಹಾಗೂ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸಾರುವ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


