ಮಂಗಳೂರು, ಜೂನ್ 30: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಹಾಗೂ ಸಿಡಾಕ್ ಮಂಗಳೂರು ವತಿಯಿಂದ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಸಹಕಾರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಷನ್, ಯುವವಾಹಿನಿ (ರಿ.) ಸುರತ್ಕಲ್ ಘಟಕ, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಹಾಗೂ ಮಹಿಳಾ ಮಂಡಲ (ರಿ.) ಕುಳಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಒಂದು ದಿನದ ಉದ್ಯಮಶೀಲತಾ ತರಬೇತಿ ಶಿಬಿರ ಕುಳಾಯಿಯ ಮಹಿಳಾ ಮಂಡಲ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶಿವಾನಂದ ಎಲಿಗಾರ್ ಮಾತನಾಡಿ, ಸ್ವಉದ್ಯೋಗ ಮತ್ತು ಉದ್ಯಮಶೀಲತೆ ಇಂದಿನ ಕಾಲದ ಅಗತ್ಯವಾಗಿದ್ದು, ಮಹಿಳೆಯರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು. ವಿವಿಧ ಸರ್ಕಾರಿ ಯೋಜನೆಗಳು, ಉದ್ಯಮ ಆರಂಭಿಸುವ ವಿಧಾನಗಳು ಹಾಗೂ ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ಅವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ 48 ಮಹಿಳೆಯರು ಭಾಗವಹಿಸಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ತರಬೇತಿಯ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಮಹಿಳಾ ಮಂಡಲ (ರಿ.) ಕುಳಾಯಿ ಹಾಗೂ ಯುವವಾಹಿನಿ (ರಿ.) ಸುರತ್ಕಲ್ ಘಟಕದ ಅಧ್ಯಕ್ಷೆ ರೇವತಿ ನವೀನ್, ಕೆ.ಎಸ್.ಟಿ.ಎ. ಕುಳಾಯಿ ಅಧ್ಯಕ್ಷ ಪ್ರಭಾಕರ್ ಕೋಟ್ಯಾನ್ ಹಾಗೂ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಉಪಸ್ಥಿತರಿದ್ದರು.
ತರಬೇತುದಾರೆ ಪ್ರವಿಶ್ಯ ಸ್ವಾಗತಿಸಿದರು. ಪ್ರೇಮ ಮಾಧವ್ ಹಾಗೂ ಶರ್ಮಿಳಾ ಪ್ರಾರ್ಥಿಸಿದರು. ರಾಜೇಶ್ವರಿ ದಿನಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


