ಮೂಲ್ಕಿ, ಜುಲೈ 16: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ವನಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಕೊಯ್ಯರ್ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ್ ಪೂಜಾರಿ ಹೇಳಿದರು. ಅವರು ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಬಬ್ಬು ಸ್ವಾಮಿ ದೈವಸ್ಥಾನದ ಪರಿಸರದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಬ್ಬು ಸ್ವಾಮಿ ದೈವಸ್ಥಾನದ ಅರ್ಚಕ ಗಣೇಶ್ ಕೊಯ್ಯರ್ ಮಾತನಾಡಿ, ಯುವವಾಹಿನಿ ಮೂಲ್ಕಿ ಘಟಕವು ದೈವಸ್ಥಾನದ ಪರಿಸರದಲ್ಲಿ ವನಮಹೋತ್ಸವ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ಅರ್ಚಕ ಶಿವನಾಥ್ ಗೇರುಕಟ್ಟೆ, ಘಟಕದ ಕಾರ್ಯದರ್ಶಿ ವೇದ ಜಯ ಕುಬೇರ್ ಹಾಗೂ ಸಮಾಜಸೇವಾ ನಿರ್ದೇಶಕಿ ದೀಕ್ಷಿತ್ ವಿ. ಸುವರ್ಣ ಉಪಸ್ಥಿತರಿದ್ದರು.
ವನಮಹೋತ್ಸವದ ಅಂಗವಾಗಿ ದೈವಸ್ಥಾನದ ಪರಿಸರದಲ್ಲಿ ಅಡಿಕೆ, ವಿವಿಧ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು. ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಸ್ವಾಗತಿಸಿದರು. ಜಯ ಕುಬೇರ್ ಕಾರ್ಯಕ್ರಮ ನಿರೂಪಿಸಿದರು. ವೇದ ಜಯ ಕುಬೇರ್ ಧನ್ಯವಾದ ಸಮರ್ಪಿಸಿದರು.


