ಕೆಂಜಾರು–ಕರಂಬಾರು, ಜುಲೈ 16: ಪರಿಸರ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ವತಿಯಿಂದ ಆಯೋಜಿಸಲಾದ ವನಮಹೋತ್ಸವ–2026 ಕಾರ್ಯಕ್ರಮವು ಕರಂಬಾರು ಪರಿಸರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷ ಮಿತ್ರದಾಸ್ ಉದ್ಘಾಟಿಸಿ ಮಾತನಾಡಿ, ಗಿಡ-ಮರಗಳನ್ನು ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಪರಿಸರ ಸಂರಕ್ಷಣೆಗೆ ಯುವವಾಹಿನಿ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ದೇವಿ ಭಜನಾ ಮಂದಿರದ ಮಾಜಿ ಅಧ್ಯಕ್ಷ ಶೇಷಪ್ಪ ಅಮೀನ್, ಕಾರ್ಯದರ್ಶಿ ಲೋಕೇಶ್ ಪೂಜಾರಿ, ಬಜಪೆ ನಾರಾಯಣ ಗುರು ಮಂದಿರದ ಉಪಾಧ್ಯಕ್ಷ ಶೇಖರ್ ಪೂಜಾರಿ ಹಾಗೂ ತುಡರ್ ಫ್ರೆಂಡ್ಸ್ ಸಂಘದ ಮಾಜಿ ಅಧ್ಯಕ್ಷ ಸುಧೀರ್ ಅತಿಥಿಗಳಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕರಂಬಾರು ಪರಿಸರದ ವಿವಿಧ ಸ್ಥಳಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ತಲಾ ಒಂದೊಂದು ಸಸಿಯನ್ನು ವಿತರಿಸಿ, ತಮ್ಮ ಮನೆಗಳಲ್ಲಿ ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿ ವನಮಹೋತ್ಸವವನ್ನು ಯಶಸ್ವಿಗೊಳಿಸಿದರು. ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದು ಘಟಕದ ಪದಾಧಿಕಾರಿಗಳು ತಿಳಿಸಿದರು.


