ಮಂಗಳೂರು, ಜುಲೈ 6: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಜುಲೈ 6ರಂದು ಸಂಜೆ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು.

ಈ ವಾರದ ಭಜನಾ ಸೇವೆಯನ್ನು ಭಜಕ ವೃಂದ ಕೋಡಿಕಲ್ ತಂಡವು ನಡೆಸಿಕೊಟ್ಟು, ಶ್ರೀ ಗೋಕರ್ಣನಾಥ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಚರಣಕ್ಕೆ ಭಕ್ತಿ ಸಂಗೀತವನ್ನು ಸಮರ್ಪಿಸಿತು. ಭಜನಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಮಯ ವಾತಾವರಣಕ್ಕೆ ಸಾಕ್ಷಿಯಾದರು.
ಸಂಜೆ 7 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಭಜನಾ ಸೇವೆ ನಡೆಸಿದ ಭಜಕ ವೃಂದ ಕೋಡಿಕಲ್ ತಂಡದ ಸದಸ್ಯರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


