ಮಂಗಳೂರು, ಜು. 13: ಯುವವಾಹಿನಿ (ರಿ.) ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ದಿವಂಗತ ಅಶೋಕ್ ಅಂಚನ್ ಕೋಡಿಕಲ್ ಅವರ ಕುಟುಂಬಕ್ಕೆ ಯುವವಾಹಿನಿ (ರಿ.) ಮಂಗಳೂರು ಘಟಕವು ಮಾನವೀಯ ಕಾಳಜಿಯಿಂದ ₹75,000/- ಧನಸಹಾಯವನ್ನು ಹಸ್ತಾಂತರಿಸಿತು.

ಅಶೋಕ್ ಅಂಚನ್ ಕೋಡಿಕಲ್ ಅವರು ದಿನಾಂಕ 30-06-2026ರಂದು ದೈವಾದೀನರಾಗಿದ್ದರು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವುದನ್ನು ಮನಗಂಡ ಯುವವಾಹಿನಿ (ರಿ.) ಮಂಗಳೂರು ಘಟಕವು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಹಾಗೂ ವಿವಿಧ ಘಟಕಗಳ ಸದಸ್ಯರ ಸಹಕಾರದೊಂದಿಗೆ ಧನಸಹಾಯವನ್ನು ಸಂಗ್ರಹಿಸಿತು. ದಿನಾಂಕ 13-07-2026ರಂದು ನಡೆದ ಉತ್ತರಕ್ರಿಯೆಯ ಸಂಪೂರ್ಣ ವೆಚ್ಚವನ್ನು ಭರಿಸಿದ ಬಳಿಕ ಉಳಿದ ₹75,000/- ಮೊತ್ತವನ್ನು ಅವರ ಧರ್ಮಪತ್ನಿ ಪುಷ್ಪಾ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, “ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯ ಧರ್ಮ. ಸಂಕಷ್ಟದ ಸಮಯದಲ್ಲಿ ನೆರವಾಗುವವರೇ ನಿಜವಾದ ಬಂಧುಗಳು” ಎಂದು ಅಭಿಪ್ರಾಯಪಟ್ಟರು. ಈ ಸೇವಾಕಾರ್ಯಕ್ಕೆ ಸಹಕರಿಸಿದ ಯುವವಾಹಿನಿಯ ಕೇಂದ್ರ ಸಮಿತಿ, ವಿವಿಧ ಘಟಕಗಳು ಹಾಗೂ ಪ್ರತಿಯೊಬ್ಬ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


