ಬಂಟ್ವಾಳ, ಜುಲೈ 16: ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ಯುವವಾಹಿನಿ (ರಿ.) ಬಂಟ್ವಾಳ ಘಟಕವು ತನ್ನ ನೂತನ ಕಾರ್ಯಕಾರಿ ಸಮಿತಿಯ ವಿಶೇಷ ಯೋಜನೆಯಾಗಿ “ಮನೆ ಮನೆ ಹಸಿರು ಅಭಿಯಾನ”ಕ್ಕೆ ಚಾಲನೆ ನೀಡಿದೆ.
ಘಟಕದ ಜಂಟಿ ಸಭೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಯುವವಾಹಿನಿಯ “ಹಸಿರುಯಾನ” ಯೋಜನೆಯಡಿ ಘಟಕದ ವ್ಯಾಪ್ತಿಯ ಪ್ರತಿಯೊಂದು ಸದಸ್ಯರ ಮನೆಯಲ್ಲಿ ಕನಿಷ್ಠ ಒಂದು ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಅಭಿಯಾನಕ್ಕೆ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಹಾಂಕಾಳಿಬೆಟ್ಟು ಅವರ ನಿವಾಸದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರೆಕೋಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, “ಮನೆ ಮನೆ ಹಸಿರು ಅಭಿಯಾನವು ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ; ಪರಿಸರದ ಬಗ್ಗೆ ಜನರಲ್ಲಿ ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಜನಾಂದೋಲನವಾಗಿದೆ. ಮುಂದಿನ ದಿನಗಳಲ್ಲಿ ಘಟಕದ ವ್ಯಾಪ್ತಿಯ ಎಲ್ಲಾ ಸದಸ್ಯರ ಮನೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು” ಎಂದು ಹೇಳಿದರು.
ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಹಾಂಕಾಳಿಬೆಟ್ಟು ಪರಿಸರ ಸಂರಕ್ಷಣೆಯ ಅಗತ್ಯತೆ ಹಾಗೂ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ಜಗದೀಶ್ ಸ್ವಾಗತಿಸಿದರು. ಸಮಾಜಸೇವಾ ನಿರ್ದೇಶಕ ಚಿನ್ನ ಕಲ್ಲಡ್ಕ ಧನ್ಯವಾದ ಸಮರ್ಪಿಸಿದರು.


