ಮಂಗಳೂರು, ಜುಲೈ 11: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಹಾಗೂ ಭಾರತಿ ಟ್ರೈನಿಂಗ್ ಸೆಂಟರ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಐದು ದಿನಗಳ ಫ್ಯಾಬ್ರಿಕ್ ಬ್ಯಾಗ್ ತರಬೇತಿಯ ಸಮಾರೋಪ ಸಮಾರಂಭವು ಜುಲೈ 11ರಂದು ಕೊಟ್ಟಾರ ಚೌಕಿಯ ಭಾರತಿ ಟ್ರೈನಿಂಗ್ ಸೆಂಟರ್‌ನಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಯಾವುದೇ ವಿಷಯವನ್ನು ಕಲಿಯಲು ಮತ್ತು ಸಾಧಿಸಲು ಆಸಕ್ತಿ ಅತ್ಯಗತ್ಯ. ಆರಂಭದಲ್ಲಿ ಹಿಂಜರಿಕೆ ಸಹಜವಾದರೂ ಧೈರ್ಯದಿಂದ ಮುಂದುವರಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ತರಬೇತುದಾರೆ ಹರಿಣಿ ಜೆ. ರಾವ್ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತಮಗೆ ಸಂತೋಷ ನೀಡುವ ಕೆಲಸವನ್ನು ಆಯ್ಕೆ ಮಾಡಿಕೊಂಡು ಸಣ್ಣ ಮಟ್ಟದಲ್ಲಾದರೂ ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ರೇಖಾ ಗೋಪಾಲ್ ಮಾತನಾಡಿ, ತರಬೇತಿಯಲ್ಲಿ ಪಡೆದ ಕೌಶಲ್ಯವನ್ನು ಕೇವಲ ಕಲಿಕೆಗೆ ಸೀಮಿತಗೊಳಿಸದೆ ಜೀವನೋಪಾಯದ ಸಾಧನವಾಗಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜುಲೈ 7ರಿಂದ 11ರವರೆಗೆ ನಡೆದ ತರಬೇತಿಯಲ್ಲಿ 25 ಮಹಿಳೆಯರು ಭಾಗವಹಿಸಿ ವಿವಿಧ ವಿನ್ಯಾಸಗಳ ಫ್ಯಾಬ್ರಿಕ್ ಬ್ಯಾಗ್‌ಗಳ ತಯಾರಿಕೆಯ ಕೌಶಲ್ಯವನ್ನು ಕಲಿತುಕೊಂಡರು. ಸಮಾರಂಭದಲ್ಲಿ ಮಹಿಳಾ ಘಟಕದ ಕಾರ್ಯದರ್ಶಿ ಸೋನಿಯಾ ರಾಜ್, ಪ್ರಥಮ ಉಪಾಧ್ಯಕ್ಷೆ ದೀಪಿಕಾ ಮನೋಜ್ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕಿ ರಮಣಿ ಉಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತರಬೇತುದಾರೆ ಹರಿಣಿ ಜೆ. ರಾವ್ ಅವರನ್ನು ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯದರ್ಶಿ ಸೋನಿಯಾ ರಾಜ್ ಧನ್ಯವಾದ ಸಮರ್ಪಿಸಿದರು.


