ಮಾಣಿ, ಜುಲೈ 15: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವವಾಹಿನಿ (ರಿ.) ಮಾಣಿ ಘಟಕದ 2026–27ನೇ ಸಾಲಿನ ಪ್ರಚಾರ ನಿರ್ದೇಶಕರಾದ ಚರಣ್ ಜೆ. ಅನಂತಾಡಿ ಅವರಿಗೆ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ₹75,000 ಧನಸಹಾಯ ಹಸ್ತಾಂತರಿಸಲಾಯಿತು.

ಘಟಕದ ಸದಸ್ಯರ ಸ್ವಯಂಪ್ರೇರಿತ ಸಹಕಾರದಿಂದ ಈ ಧನಸಹಾಯವನ್ನು ಸಂಗ್ರಹಿಸಿ, ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ, ಸಂಕಷ್ಟದ ಸಂದರ್ಭದಲ್ಲಿ ಸದಸ್ಯರೊಂದಿಗೆ ಹೆಗಲಾಗಿ ನಿಲ್ಲುವುದು ಯುವವಾಹಿನಿಯ ಸೇವಾ ಮನೋಭಾವ ಮತ್ತು ಸಂಘಟನೆಯ ನಿಜವಾದ ಶಕ್ತಿಯ ಪ್ರತೀಕವಾಗಿದೆ. ಸಮಾಜಮುಖಿ ಕಾರ್ಯಗಳ ಜೊತೆಗೆ ತನ್ನ ಸದಸ್ಯರ ಸಂಕಷ್ಟದಲ್ಲೂ ಸ್ಪಂದಿಸುವುದು ಯುವವಾಹಿನಿಯ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಚರಣ್ ಜೆ. ಅನಂತಾಡಿ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.


