ಉಡುಪಿ, ಜು. 16: ಯುವ ವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಜುಲೈ 16ರಂದು ಗುರುವಾರ ಸಂಜೆ ಬಿಂದಿಯವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುರು ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು.

ಮುಖ್ಯೋಪಾಧ್ಯಾಯರು ಹಾಗೂ ಕಾರ್ಯಕ್ರಮದ ನಿರೂಪಕರಾದ ರಘುರಾಮ್ ಕೋಟ್ಯಾನ್ ಅವರು ಗುರು ಸಂದೇಶ ನೀಡಿ, ಯುವ ವಾಹಿನಿಯು ಯುವಜನತೆಗೆ ಪ್ರೇರಣೆಯಾಗುವ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣ ಅವರು ಪೂಜೆ ನೆರವೇರಿಸಿ, ಪ್ರಸಾದ ವಿತರಿಸಿ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು. “ಮನೆಗೊಂದು ಮರ – ಊರಿಗೊಂದು ವನ” ಎಂಬ ಧ್ಯೇಯದ ಅಂಗವಾಗಿ ಸಮಾಜಸೇವಾ ನಿರ್ದೇಶಕರಾದ ಸುಜಿತ್ ಮಟ್ಟು ಹಾಗೂ ಮಾಜಿ ಅಧ್ಯಕ್ಷರಾದ ರಘುನಾಥ್ ಮಾಬಿಯನ್ ಅವರು ಮನೆಯವರಿಗೆ ಹಾಗೂ ಗುರು ಸಂದೇಶ ನೀಡಿದ ಅತಿಥಿಗಳಿಗೆ ಯುವ ವಾಹಿನಿಯ ರಜತ ಸಂಭ್ರಮದ ನೆನಪಿನ ಕಾಣಿಕೆಯಾದ ‘ರಜತ ರಶ್ಮಿ’ ಪುಸ್ತಕದೊಂದಿಗೆ ಗಿಡಗಳನ್ನು ನೀಡಿ ಗೌರವಿಸಿದರು. ಘಟಕದ ಅಧ್ಯಕ್ಷರಾದ ವಿನೋದ್ ಮಂಚಿ ಅವರು ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ವೀಕ್ಷಿತ್ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಅಂತಿಮವಾಗಿ ಎಲ್ಲರೂ ಸಮೂಹ ಛಾಯಾಚಿತ್ರ ತೆಗೆಸಿಕೊಂಡು ಉಪಹಾರ ಸ್ವೀಕರಿಸುವ ಮೂಲಕ ಗುರು ಸತ್ಸಂಗ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪ್ತಿಯಾಯಿತು.


