ಮಂಗಳೂರು, ಜೂನ್ 21: ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕಿ ಸಂಜನಾ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯೋಗದ ಮೂಲ ಸ್ವರೂಪ, ಅದರ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವ ಮತ್ತು ಆಧುನಿಕ ಜೀವನದಲ್ಲಿ ಯೋಗದ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು.
ಜೂನ್ 21ರಂದು ಯೋಗ ದಿನವನ್ನು ಆಚರಿಸುವುದರ ಹಿಂದಿನ ಮಹತ್ವವನ್ನು ವಿವರಿಸಿದ ಅವರು, ಇದು ವರ್ಷದ ಅತಿ ದೀರ್ಘ ಹಗಲು ಹಾಗೂ ಅತಿ ಚಿಕ್ಕ ರಾತ್ರಿಯನ್ನು ಹೊಂದಿರುವ ದಿನವಾಗಿದ್ದು, ಆದಿಯೋಗಿ ಶಿವನು ಸಪ್ತ ಋಷಿಗಳಿಗೆ ಯೋಗದ ಜ್ಞಾನವನ್ನು ನೀಡಿದ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನವು ಆಧ್ಯಾತ್ಮಿಕ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದರು.
ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ದೈನಂದಿನ ಕೆಲಸಗಳೆಲ್ಲವೂ ಯಂತ್ರಗಳ ಅವಲಂಬಿತವಾಗಿವೆ. ಹಿಂದೆ ಜನರು ದೈಹಿಕ ಶ್ರಮದೊಂದಿಗೆ ಬದುಕುತ್ತಿದ್ದರೆ, ಇಂದು ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಮಕ್ಕಳಿಂದ ಹಿರಿಯರವರೆಗೆ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಇತರ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾಗಿರುವ ಪರಿಣಾಮ ಮನಶಾಂತಿ, ಆರೋಗ್ಯ ಮತ್ತು ಸಾಮಾಜಿಕ ಸಂಪರ್ಕಗಳು ಕ್ಷೀಣಿಸುತ್ತಿವೆ. ಇಂತಹ ಸಮಸ್ಯೆಗಳಿಗೆ ಯೋಗವೇ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಹೇಳಿದರು.
ಯೋಗವು ಕೇವಲ ವ್ಯಾಯಾಮವಲ್ಲ; ದೇಹ, ಮನಸ್ಸು ಮತ್ತು ಉಸಿರಾಟವನ್ನು ಒಂದಾಗಿಸುವ ಜೀವನ ಪದ್ಧತಿಯಾಗಿದೆ. ಅಷ್ಟಾಂಗ ಯೋಗ, ಯಮ-ನಿಯಮಗಳ ಮೂಲಕ ಆರೋಗ್ಯಕರ ಆಹಾರ ಪದ್ಧತಿ, ಶಿಸ್ತು, ಸದೃಢ ದೇಹ ಮತ್ತು ಸಮತೋಲಿತ ಮನಸ್ಸನ್ನು ಬೆಳೆಸಿಕೊಳ್ಳಬಹುದು. ಯೋಗದಿಂದ ದೊರೆಯುವ ಮಾನಸಿಕ ನೆಮ್ಮದಿ ಇತರೆ ಯಾವುದೇ ದೈಹಿಕ ವ್ಯಾಯಾಮದಿಂದ ದೊರೆಯುವುದಿಲ್ಲ. ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ; ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದು ಅವರು ಹೇಳಿದರು.
ಮೊಬೈಲ್‌ನಲ್ಲಿನ ಅನಗತ್ಯ ಮಾಹಿತಿಯನ್ನು ಅಳಿಸುವಂತೆ ವರ್ಷಕ್ಕೊಮ್ಮೆ ಯೋಗ ದಿನ ಆಚರಿಸುವುದರಿಂದ ಪ್ರಯೋಜನವಿಲ್ಲ. ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ ಅದರ ನಿಜವಾದ ಫಲ ದೊರೆಯುತ್ತದೆ ಎಂದು ತಿಳಿಸಿದ ಅವರು, ಕಳೆದ ಐದು ವರ್ಷಗಳಿಂದ ಉಚಿತವಾಗಿ ಯೋಗ ತರಗತಿಗಳನ್ನು ನಡೆಸಲು ಸ್ಥಳಾವಕಾಶ ಕಲ್ಪಿಸುತ್ತಿರುವ ಯುವವಾಹಿನಿ (ರಿ.) ಮಂಗಳೂರು ಘಟಕಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ತಂದೆ ಬಾಬು ಶೆಟ್ಟಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿ ಸಂಜನಾ ಪ್ರಭು ಹಾಗೂ ಬಾಬು ಶೆಟ್ಟಿಯವರನ್ನು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು. ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


